ಚಾಮರಾಜನಗರ: ಜಿಲ್ಲೆಯ ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆ.15 ರಂದು ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಕಚೇರಿ ಮುಂಭಾಗ ಟ್ರ್ಯಾಕ್ಷರ್ ರ‌್ಯಾಲಿ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಮೂಕಳ್ಳಿ ಮಹದೇವಸ್ವಾಮಿ ತಿಳಿಸಿದರು.
ಬಣ್ಣಾರಿ ಮಹದೇಶ್ವರ ಸಕ್ಕರೆ ಕಾರ್ಖಾನೆಗಳ ಮುಂದೆ ಸಾವಿರಾರು ರೈತರು ಸಮಾವೇಶ ನಡೆಸಿ, ಕಬ್ಬಿನ ಬಾಕಿ ಹಣ ಪಾವತಿಸಿ ಕಾರ್ಖಾನೆ ಆರಂಭಿಸಬೇಕು ಎಂದು ಎಚ್ಚರಿಕೆ ಸಂದೇಶ ನೀಡಿದ್ದರೂ ಗಂಭೀರವಾಗಿ ಪರಿಗಣಿಸದೆ ಕಾರ್ಖಾನೆ ಆರಂಭಿಸಲು ಮುಂದಾಗಿರುವುದು ರೈತ ದ್ರೋಹಿ ಕಾರ್ಯವಾಗಿದೆ. ರೈತರ ಹಳೆ ಬಾಕಿ ಟನ್‌ಗೆ 150 ರೂ., ಕಳೆದ ವರ್ಷದ ಉಪ ಉತ್ಪನ್ನಗಳ ಲಾಭ ಹಂಚಿಕೆ, ಪ್ರಸಕ್ತ ಸಾಲಿನ ಹೆಚ್ಚುವರಿ ಕಬ್ಬಿನ ದರ ನಿಗದಿ ಮಾಡುವ ತನಕ ಬಣ್ಣಾರಿ ಮಹದೇಶ್ವರ ಸಕ್ಕರೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಬೇಡಿ ಎಂದು ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಳೆದ ಐದು ವರ್ಷಗಳ ಹಿಂದೆ ಬಣ್ಣಾರಿ ಕಾರ್ಖಾನೆ ಸಕ್ಕರೆ ಇಳುವರಿ 10.50 ತೋರಿಸುತ್ತಿತ್ತು. ಈಗ 9 ಕ್ಕೆ ಇಳಿದಿದೆ. ಇದರಿಂದ ರೈತರಿಗೆ ಟನ್‌ಗೆ 450 ರೂ ಕಡಿಮೆ ಹಣ ಸಿಗುತ್ತಿದೆ. ಇದರ ಪರಿಣಾಮ ರೈತರಿಗೆ ಕಬ್ಬು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಕಬ್ಬಿನ ದರ ಸಿಗುತ್ತಿದೆ. ಕಬ್ಬು ಬೆಳೆಯುವ ರೈತರು ಕಾರ್ಖಾನೆಯ ಫೀಲ್ಡ್ಮೆನ್‌ಗಳ ಕುತಂತ್ರಕ್ಕೆ ಮರುಳಾಗದೆ ಸಂಘಟನೆಯ ತೀರ್ಮಾನವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿ. ರೈತರ ಸಾಲ ಮನ್ನಾ, ಸ್ವಾಮಿನಾಥನ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ರಾಜ್ಯಾದ್ಯಂತ ಅ.15 ರಂದು ಜಿಲ್ಲಾಧಿಕಾರಿ ಕಛೇರಿ ಹಾಗೂ ತಹಸಿಲ್ದಾರ್ ಕಚೇರಿ ಮುಂದೆ ಟ್ರಾಕ್ಟರ್ ರ‌್ಯಾಲಿ ನಡೆಸಲಾಗುವುದು ಎಂದರು.
ಗೋಷ್ಠಿಯಲ್ಲಿ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಕಾರ್ಯಾಧ್ಯಕ್ಷ ಉಡಿಗಾಲ ರೇವಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಹಿಂದುವಾಡಿ ಮಾದೇಶ್, ಲೋಕೇಶ್ ವೀರನಪುರ, ಸುಂದ್ರಪ್ಪ ಹೆಗ್ಗೋಠಾರ, ಶಿವಸ್ವಾಮಿ ಹಾಜರಿದ್ದರು.