ಕನ್ನಡದ ಕೇರಳಿಗರಲ್ಲೂ ಮಡುಗಟ್ಟಿದೆ ದುಃಖ

03rajesh2
Published on

ಚಾಮರಾಜನಗರ: ವಯನಾಡಿನಲ್ಲಿ ಸಂಭವಿಸಿದ ಭೂ ಕುಸಿತಕ್ಕೆ ಕರ್ನಾಟಕದಲ್ಲಿ ವಾಸವಾಗಿರುವ ಕೇರಳಿಗರಲ್ಲೂ ದುಃಖ ಮಡುಗಟ್ಟಿದ್ದು, ವಯನಾಡಿನ ಜನತೆಗಾಗಿ ಪ್ರಾರ್ಥಿಸುತ್ತಿದ್ದಾರೆ.

ಕೇರಳದ ಹಲವಾರು ಭಾಗಗಳಿಂದ ವಲಸೆ ಬಂದಿರುವ ಸಾವಿರಾರು ಜನ ಕೇರಳಿಗರು ಬೆಂಗಳೂರು, ಮೈಸೂರು, ಹಾಸನ, ಚಾಮರಾಜನಗರ, ಮಂಡ್ಯ, ಕೊಡಗು, ನಂಜನಗೂಡು, ಹುಣಸೂರು, ಕೆ.ಆರ್.ನಗರ ಹಾಗೂ ಇನ್ನಿತರೆ ಕಡೆಗಳಲ್ಲಿ ಹೆಚ್ಚಾಗಿ ಹೋಟೆಲ್ ಹಾಗೂ ಬೇಕರಿ ಉದ್ಯಮ ನಡೆಸುತ್ತಿದ್ದಾರೆ. ಕಳೆದ 15-20 ವರ್ಷಗಳಿಂದಲೂ ಕರ್ನಾಟಕದಲ್ಲೇ ಉದ್ಯಮ ನಡೆಸುತ್ತಾ ಬದುಕು ಕಟ್ಟಿಕೊಂಡಿರುವ ಕೇರಳಿಗರು, ಈಗ ದುರಂತ ಸಂಭವಿಸಿರುವ ವಯನಾಡಿನ ಮುಂಡಕೈ, ಚೂರಲ್ಮಲ ಹಾಗೂ ಇನ್ನಿತರೆ ಕಡೆಗಳಲ್ಲಿ ಮನೆ, ಜಮೀನು, ಟೀ-ಕಾಫಿ ಎಸ್ಟೇಟ್ ಹಾಗೂ ಇನ್ನಿತರೆ ಆಸ್ತಿಪಾಸ್ತಿಗಳನ್ನು ಹೊಂದಿದ್ದಾರೆ.

ವಯನಾಡಿನ ಭೂಕುಸಿತ ಕರ್ನಾಟಕದಲ್ಲಿ ನೆಲೆಸಿರುವ ಕೇರಳಿಗರಲ್ಲೂ ಅಪಾರವಾದ ನೋವು ಉಂಟುಮಾಡಿದೆ. ಸಾಕಷ್ಟು ಜನರು ತಮ್ಮ ಆಸ್ತಿ-ಪಾಸ್ತಿ ಅಲ್ಲದೇ ನೆರೆಹೊರೆಯವರನ್ನು ಕಳೆದುಕೊಂಡಿದ್ದಾರೆ. ಚಿಕ್ಕಂದಿನಿಂದಲೂ ಜೊತೆಯಲ್ಲೇ ಬೆಳೆದ ಸ್ನೇಹಿತರನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ದುರಂತ ಸಂಭವಿಸಿದ ಬಳಿಕ ಕರ್ನಾಟಕದಲ್ಲಿ ವಾಸವಾಗಿರುವ ಹೆಚ್ಚಿನ ಜನರು ವಯನಾಡಿಗೆ ತೆರಳಿ ಅಲ್ಲಿನ ಜನರ ದುಃಖದಲ್ಲಿ ಭಾಗಿಯಾಗಿದ್ದಾರೆ. ಸ್ಥಳೀಯ ಆಡಳಿತ ಹಾನಿ ಉಂಟಾಗಿರುವ ಪ್ರದೇಶದ ಸಮೀಕ್ಷೆ ಮಾಡುತ್ತಿದ್ದು, ಅವರಿಗೆ ತಮ್ಮ ಆಸ್ತಿ-ಪಾಸ್ತಿಯ ಕುರಿತು ಮಾಹಿತಿಯನ್ನು ನೀಡಿ ಬಂದಿದ್ದಾರೆ. ಪ್ರಕೃತಿಯ ವಿಕೋಪಕ್ಕೆ ಯಾರನ್ನು ನಾವು ದೂರಲು ಸಾಧ್ಯ ಎನ್ನುವ ಮಾತುಗಳನ್ನಾಡುವ ಕನ್ನಡದ ಕೇರಳಿಗರು ಪ್ರಾರ್ಥನೆಯಷ್ಟೇ ನಮಗೆ ಉಳಿದಿರುವ ದಾರಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸ್ನೇಹಿತರನ್ನು ಕಳೆದುಕೊಂಡೆವು:
ಸುಮಾರು 20 ವರ್ಷಗಳಿಂದ ಚಾ.ನಗರದಲ್ಲಿ ಬೇಕರಿ ಉದ್ಯಮ ನಡೆಸುತ್ತಿರುವ ಚೋರಲ್‌ಮಲ ನಿವಾಸಿ ರಾಜ್‌ಕುಮಾರ್ ಹಲವಾರು ಸ್ನೇಹಿತರನ್ನು ಕಳೆದುಕೊಂಡು ಸಂಕಟದಲ್ಲಿದ್ದಾರೆ. ಸದ್ಯಕ್ಕೆ ಮೈಸೂರಿನಲ್ಲಿ ವಾಸವಾಗಿರುವ ಇವರು ಭೂಕುಸಿತ ಸಂಭವಿಸಿರುವ ಚೋರಲ್‌ಮಲ ಗ್ರಾಮದಲ್ಲಿ ಸ್ವಂತ ಮನೆ ಹಾಗೂ ಜಮೀನು ಕೂಡ ಹೊಂದಿದ್ದಾರೆ. ತಿಂಗಳಿಗೆ ಎರಡು-ಮೂರು ಬಾರಿ ವಯನಾಡಿಗೆ ಹೋಗಿಬರುತ್ತಿದ್ದ ರಾಜ್‌ಕುಮಾರ್ ಅವರ ಮನೆಗೆ ಚೋರಲ್‌ಮಲದ ಶಾಲೆಯಿಂದಾಗಿ ಅದೃಷ್ಟವಶಾತ್ ಯಾವುದೇ ಹಾನಿಯಾಗಿಲ್ಲ. ಆದರೆ ಹಲವಾರು ಸ್ನೇಹಿತರನ್ನು, ಸ್ನೇಹಿತರ ಕುಟುಂಬದವರನ್ನು ಭೂಕುಸಿತದಲ್ಲಿ ಕಳೆದುಕೊಂಡಿದ್ದಾರೆ. ತಮ್ಮವರ ಜಮೀನು, ಮನೆ ನಾಶವಾಗಿರುವುದನ್ನು ಕಂಡು ತೀವ್ರ ದುಃಖಿತರಾಗಿದ್ದಾರೆ. ಈಗಾಗಲೇ ಕೇರಳದ ಸ್ಥಳೀಯ ಆಡಳಿತ ದುರಂತದಲ್ಲಿ ಮಡಿದವರು, ಆಸ್ತಿ-ಪಾಸ್ತಿ ಹಾನಿಯಾಗಿರುವವರ ಮಾಹಿತಿ ಸಂಗ್ರಹಿಸುತ್ತಿದ್ದು, ಚೋರಲ್‌ಮಲಗೆ ಹೋಗಿ ನಮ್ಮ ಮಾಹಿತಿ ನೀಡಿ ಬಂದಿದ್ದೇನೆ. ಈ ದುರಂತವನ್ನು ನೆನಪುಮಾಡಿಕೊಳ್ಳಲು ಆಗುತ್ತಿಲ್ಲ ಎಂದು ವಿಜಯವಾಣಿ ಜತೆಗೆ ಮಾತನಾಡಿ ಅಳಲು ತೋಡಿಕೊಂಡರು.

ಗಡಿಜಿಲ್ಲೆಯಲ್ಲಿ ಹೆಚ್ಚಾಗಿ ನೆಲೆಸಿರುವ ಕೇರಳಿಗರು:
ಕೇರಳದ ಗಡಿಯಲ್ಲಿ ಬರುವ ಚಾಮರಾಜನಗರ, ಗುಂಡ್ಲುಪೇಟೆ, ಮೈಸೂರಿನ ಎಚ್.ಡಿ.ಕೋಟೆ ತಾಲೂಕಿನ ವ್ಯಾಪ್ತಿಯಲ್ಲಿ ಕೇರಳಿಗರು ಹೆಚ್ಚಾಗಿ ನೆಲೆಸಿದ್ದಾರೆ. ಹೋಟೆಲ್, ಬೇಕರಿ ಉದ್ಯಮದಲ್ಲಿ ಹೆಸರಾಗಿರುವ ಕೇರಳಿಗರು ಇತ್ತೀಚೆಗೆ ಕರ್ನಾಟಕದಲ್ಲೇ ಜಮೀನು ಖರೀದಿಸಿ, ಜಾಗವನ್ನು ತೆಗೆದುಕೊಂಡು ವಾಸಮಾಡುತ್ತಿದ್ದಾರೆ. ಕೋವಿಡ್‌ಗಿನ್ನೂ ಮುನ್ನಾ ಹೆಚ್ಚಾಗಿ ಸಣ್ಣ-ಪುಟ್ಟ ಉದ್ಯಮ ಪ್ರಾರಂಭಿಸಲು ಕರ್ನಾಟಕಕ್ಕೆ ಬಂದ ಕೇರಳಿಗರು, ಯಾವುದೇ ಕಾರಣಕ್ಕೂ ಕೇರಳದ ನಂಟನ್ನು ಬಿಟ್ಟುಕೊಟ್ಟಿಲ್ಲ. ಈ ದುರಂತ ಸಂಭವಿಸಿರುವ ವಯನಾಡು ಹಾಗೂ ಇನ್ನಿತರೆ ಕಡೆಗಳಲ್ಲಿ ಇರುವ ತಮ್ಮ ಜಮೀನು, ಮನೆಗಳನ್ನು ಆಗೆಯೇ ಉಳಿಸಿಕೊಂಡು ಬಂದಿದ್ದಾರೆ. ಅದರಲ್ಲಿ ಹಲವಾರು ಜನರಿಗೆ ವಯನಾಡು ಭೂಕುಸಿತ ಆಘಾತವನ್ನು ಉಂಟು ಮಾಡಿದೆ. ತಮ್ಮವರನ್ನು ಕಳೆದುಕೊಂಡಿರುವ ನೋವು ಅವರನ್ನು ದುಃಖದ ಮಡುವಿನಲ್ಲಿ ಇರುವಂತೆ ಮಾಡಿದೆ.

ಚೋರಲ್‌ಮಲದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ನನ್ನ ಹಲವಾರು ಸ್ನೇಹಿತರು, ಅವರ ಕುಟುಂಬದವರು ಮೃತಪಟ್ಟಿದ್ದಾರೆ. ಹೆಚ್ಚಿನ ಜನರ ಮನೆಗಳು ನಾಶವಾಗಿದೆ. ಈಗಾಗಲೇ ಅಲ್ಲಿಗೆ ಭೇಟಿ ಕೊಟ್ಟು ಬಂದಿದ್ದೇನೆ. ಆ ಸಂಕಟವನ್ನು ಕಣ್ಣಿಂದ ನೋಡಲು ಸಾಧ್ಯವಾಗುತ್ತಿಲ್ಲ. ವಯನಾಡಿಗಾಗಿ ನಾವು ಪ್ರಾರ್ಥಿಸುತ್ತಿದ್ದೇವೆ.
-ರಾಜ್‌ಕುಮಾರ್, ವಯನಾಡು ನಿವಾಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net