ಪಣ್ಯದಹುಂಡಿಯಲ್ಲಿ ಕರುಗಳ ಪ್ರದರ್ಶನ

01rajesh3
Published on

ಚಾಮರಾಜನಗರ: ರೈತರು ಹೈನುಗಾರಿಕೆಯ ತೆಯಲ್ಲಿಯೇ ಉತ್ತಮವಾಗಿ ಕರುಗಳನ್ನು ಪಾಲನೆ ಪೋಷಣೆ ಮಾಡಿದರೆ, ಮುಂದೆ ಗುಣಮಟ್ಟದ ಹಾಲು ನೀಡುವ ಹಸುವನ್ನು ಹೊಂದಲು ಸಾಧ್ಯ ಎಂದು ಚಾಮುಲ್ ನಿರ್ದೇಶಕ ಸದಾಶಿವಮೂರ್ತಿ ತಿಳಿಸಿದರು.

ತಾಲೂಕಿನ ಪಣ್ಯದಹುಂಡಿಯಲ್ಲಿ ಜಿಲ್ಲಾ ಹಾಲು ಒಕ್ಕೂಟ, ಪಣ್ಯದಹುಂಡಿ ಹಾಲು ಉತ್ಪಾದಕರ ಸಹಕಾರ ಸಂಘದ ಸಹಯೋಗದಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ಮಿಶ್ರ ತಳಿ ಕರುಗಳ ಪ್ರದರ್ಶನ ಮತ್ತು ಉತ್ತಮ ಕರುಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.

ಹೈನುಗಾರಿಕೆ ರೈತರ ಜೀವನಾಡಿಯಾಗಿದ್ದು, ಹೈನು ಉದ್ಯಮವನ್ನು ಬೆಳೆಸುವ ಮೂಲಕ ಹಸುಗಳನ್ನು ಸಹ ವೈಜ್ಞಾನಿಕವಾಗಿ ಪಾಲನೆ ಮಾಡಿ ಗುಣಮಟ್ಟದ ಹಾಲು ಪಡೆದುಕೊಳ್ಳಲು ಮುಂದಾಗಬೇಕು. ಕರು ಹುಟ್ಟಿದ ದಿನದಂದಲೇ ಅದನ್ನು ಪಾಲನೆ ಪೋಷಣೆ ಮಾಡುವ ವಿಧಾನವನ್ನು ಅನುಸರಿಸಿ, ಉತ್ತಮ ರಾಸು ಮಾಡುವ ಜವಾಬ್ದಾರಿಯು ನಮ್ಮದಾಗಿದೆ ಎಂದರು.

ಪ್ರದರ್ಶನದಲ್ಲಿ ಆರು ತಿಂಗಳ ಕರುಗಳ ವಿಭಾಗದಲ್ಲಿ ನಂಜೇದೇವನಪುರ ಸಂತೋಷ ಪ್ರಥಮ ಸ್ಥಾನ ಪಡೆದು 12 ಸಾವಿರ ರೂ. ನಗದು ಬಹುಮಾನ ಪಡೆದರು. ಕರಿನಂಜನಪುರದ ಸಿದ್ದರಾಜು ದ್ವತೀಯ ಸ್ಥಾನ ಪಡೆದುಕೊಂಡರು. 12 ತಿಂಗಳ ವಿಭಾಗದಲ್ಲಿ ಕರಿಯನಕಟ್ಟೆ ರಾಘವೇಂದ್ರ ಪ್ರಥಮ, ಉಮ್ಮತ್ತೂರು ಪುಟ್ಟಣ್ಣ ದ್ವಿತೀಯ ಬಹುಮಾನ ಪಡೆದರು. ಪಣ್ಯದಹುಂಡಿ ಮಹೇಂದ್ರ, ಕರಿನಂಜನಪುರ ಶಾಂತಮೂರ್ತಿ, ನಲ್ಲೂರು ಶಿವಯ್ಯ, ನಾಗವಳ್ಳಿ ಸಿದ್ದಶೆಟ್ಟಿ, ಪುಟ್ಟನಪುರ ಮಹೇಶ್, ಬುದಂಬಳ್ಳಿ ಮಹೇಶ್ ಅವರು ಸಮಾಧಾನಕರ ಬಹುಮಾನ ಪಡೆದರು.

ಕಾರ್ಯಕ್ರಮದಲ್ಲಿ ಚಾಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ. ರಾಜಕುಮಾರ್, ಎಚ್.ಎಸ್.ಬಸವರಾಜು, ಶೇಖರಣ ಮತ್ತು ಪರಿಕರಣೆ ವಿಭಾಗದ ವ್ಯವಸ್ಥಾಪಕ ಶರತ್‌ಕುಮಾರ್, ಸಹಾಯಕ ವ್ಯವಸ್ಥಾಪಕ ಡಾ.ಎನ್.ಅಮರ್, ಡಾ.ನವೀನ್ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net