

ಚಾಮರಾಜನಗರ: ಜನಪದ ಕಲೆ, ಸಂಸ್ಕೃತಿ ನಿಂತ ನೀರಲ್ಲ, ಅದು ನಿರಂತರವಾಗಿ ಚಲನಶೀಲವಾಗಿದೆ ಎಂದು ಸಾಹಿತಿ ಹಾಗೂ ಸಂಸ್ಕೃತಿ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟರು.
ನಗರದ ವರನಟ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಕರ್ನಾಟಕ ಜಾನಪದ ಅಕಾಡಮಿ, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಆಕಾಶವಾಣಿ ಮೈಸೂರು ಎಫ್.ಎಂ. 100.06 ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಜಾನಪದ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜನಪದ ಸಂಸ್ಕೃತಿ, ಸಂಗೀತ ಕಲೆಗಳು ಗ್ರಾಮೀಣ ಜನರ ವೃತ್ತಿಬದುಕಿನ ಮೇಲೆ ಅವಲಂಬಿತವಾಗಿವೆ. ಜನರು ದಿನನಿತ್ಯದ ದುಡಿಮೆಯ ಬಿಡುವಿನ ವೇಳೆಯಲ್ಲಿ ಕಲೆಗಳನ್ನು ಅಸ್ವಾದಿಸುತ್ತಾರೆ. ಸುಗ್ಗೀ ಕಣ, ಕಳೆ ಕೀಳುವಾಗ, ಗದ್ದೆ ನಾಟೀ ಮಾಡುವಾಗ, ದೋಣಿ ನಡೆಸುವಾಗ ಜನಪದ ಕಾವ್ಯಗಳು ಮೇಳೈಸುತ್ತವೆ. ಜನಪದ ಎಂದಿಗೂ ಕಳೆಗುಂದಿಲ್ಲ. ಅದು ತನ್ನ ಚಲನಶೀಲತೆಯನ್ನು ಇಂದಿಗೂ ಉಳಿಸಿಕೊಂಡಿದೆ. ವಿಕಾಸ ಹಾಗೂ ವಿಸ್ತರಣೆ ಜನಪದ ಕಲೆಯ ಅವಿಭಾಜ್ಯ ಅಂಗಗಳಾಗಿದ್ದು, ಜನರ ನಿತ್ಯ ಬದುಕಿನಲ್ಲಿ ಹಾಸುಹೊಕ್ಕಾಗಿವೆ ಎಂದರು.
ಚಾಮರಾಜನಗರ ಜಿಲ್ಲೆ ಜಾನಪದ ಕಲೆಗಳಿಗೆ ಇಡೀ ರಾಜ್ಯದ ಕೇಂದ್ರಸ್ಥಾನವಾಗಿದೆ. ಸಾಹಿತ್ಯ, ಸಂಸ್ಕೃತಿಗೆ ದಕ್ಷಿಣದ ಹೆಬ್ಬಾಗಿಲು ಆಗಿದೆ. ಕರ್ನಾಟಕಕ್ಕೆ ಮಾದರಿಯಾಗುವ ಜನಪದ ಕಲೆಗಳು ಇಲ್ಲಿವೆ. ಚಾಮರಾಜನಗರಕ್ಕೆ ಜನಪದ ಕಲೆ ದೈವಕಲೆಯಾಗಿದೆ. ಮಲೆ ಮಹದೇಶ್ವರ, ಮಂಟೇಸ್ವಾಮಿ, ಸಿದ್ದಪ್ಪಾಜಿಯಂತಹ ಸಾಧುಸಂತರು ನಡೆದಾಡಿದ ಪುಣ್ಯಭೂಮಿ ಇದಾಗಿದೆ. ಎಲ್ಲಾ ಬಗೆಯ ಜನಪದ ಕಲಾವಿದರು ಇಲ್ಲಿದ್ದಾರೆ. ಕಲಾವಿದರಲ್ಲಿ ಇತ್ತೀಚೆಗೆ ಜಾಗೃತ ಪ್ರಜ್ಞೆ ಮೂಡಿದೆ. ವರ್ತಮಾನದಲ್ಲಿ ನಮ್ಮ ಉದ್ಯೋಗಕ್ಕೂ ಬದುಕಿನ ಕಲೆಗೂ ಸಂಬಂಧವಿದೆ ಎಂದು ತಿಳಿಸಿದರು.
ಚಾಮರಾಜನಗರ ಮತ್ತು ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನ ಮಾತನಾಡಿ, ಜಿಲ್ಲೆಯ ಜಾನಪದ ಕಲಾವಿದರು ರಾಜ್ಯಕ್ಕೆ, ದೇಶಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ರಾಷ್ಟ್ರಮಟ್ಟದಲ್ಲಿ ಅವಕಾಶಗಳನ್ನು ಪಡೆದಿದ್ದಾರೆ. ಜಿಲ್ಲೆ ಅನೇಕ ಕಲಾವಿದರನ್ನು ಚಿತ್ರರಂಗಕ್ಕೂ ನೀಡಿದೆ. ಜಾನಪದ ಕಲೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಡಾ ಅಧ್ಯಕ್ಷ ಅಧ್ಯಕ್ಷ ಪಿ.ಮರಿಸ್ವಾಮಿ, ಮೈಸೂರು ಆಕಾಶವಾಣಿ ಉಪನಿರ್ದೇಶಕ ಎಸ್.ಎಸ್.ಉಮೇಶ್, ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ. ಚಂದ್ರು, ಕರ್ನಾಟಕ ಜಾನಪದ ಅಕಾಡಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಕುಮಾರ್, ವಿಧಾನ ಪರಿಷತ್ ಶಾಸಕ ಕೆ.ವಿವೇಕಾನಂದ, ಜಾನಪದ ಅಕಾಡಮಿ ಸದಸ್ಯ ಉಮೇಶ್, ಮಲ್ಲಿಕಾರ್ಜುನ ಕಲ್ಲಹಳ್ಳಿ, ರಿಜಿಸ್ಟ್ರಾರ್ ನಮ್ರತಾ, ಗುರುರಾಜ ಹೊಸಕೋಟೆ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.