ವ್ಯಾಪಾರಿಗಳಿಗೆ ನೆರವಾದ ಪಿಎಂ ಸ್ವನಿಧಿ

25rajesh5
Published on

ಚಾಮರಾಜನಗರ: ಬೀದಿ ಬದಿ ವ್ಯಾಪಾರಿಗಳ ಆರ್ಥಿಕ ಸ್ವಾವಲಂಬನೆಯ ಉದ್ದೇಶದಿಂದ ಜಾರಿಗೆ ತಂದಿರುವ ಪಿಎಂ ಸ್ವನಿಧಿ ಸಣ್ಣ ಸಾಲ ಯೋಜನೆ ಅತ್ಯಂತ ಪರಿಣಾಮಕಾರಿಯಾಗಿ ಜಾರಿಯಾಗುತ್ತಿದ್ದು, ಬೀದಿ ಬದಿ ವ್ಯಾಪಾರಿಗಳಿಗೆ ನೆರವಾಗಿದೆ.

ಜಿಲ್ಲೆಯಲ್ಲಿ ಪಿಎಂ ಸ್ವನಿಧಿ ಯೋಜನೆಯ 2023-24 ನೇ ಸಾಲಿನ ಆರ್ಥಿಕ ಸರ್ವೇಯ ಮಾಹಿತಿಯ ಪ್ರಕಾರ ಚಾಮರಾಜನಗರ ಸಭೆ ವ್ಯಾಪ್ತಿಯಲ್ಲಿ 1316 ಬೀದಿ ಬದಿ ವ್ಯಾಪಾರಿಗಳು ಪಿಎಂ ಸ್ವನಿಧಿ ಯೋಜನೆಯಡಿ ಸಾಲವನ್ನು ಪಡೆದಿದ್ದಾರೆ. ಅದರಲ್ಲಿ 1316 ಬೀದಿ ಬದಿವ್ಯಾಪಾರಿಗಳು ಸಾಲವನ್ನು ಮರುಪಾವತಿ ಮಾಡುತ್ತಿದ್ದು, ಶೇ. 100 ರಷ್ಟು ಜನರು ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯಲ್ಲಿ 952 ಬೀದಿ ವ್ಯಾಪಾರಿಗಳಲ್ಲಿ 785 ಜನರು ಸಾಲದ ಸದ್ಬಳಕೆ ಮಾಡಿಕೊಂಡಿದ್ದು, 167 ಜನರು ಸಾಲವನ್ನು ಸೂಕ್ತ ರೀತಿಯಲ್ಲಿ ಮರುಪಾವತಿ ಮಾಡುತ್ತಿಲ್ಲ. ಆಗಾಗಿ ಶೇ. 82.46 ಜನರು ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆ. ಗುಂಡ್ಲುಪೇಟೆ ಪುರಸಭೆ ವ್ಯಾಪ್ತಿಯಲ್ಲಿ 399 ಜನರು ಸಾಲ ಪಡೆದಿದ್ದು, 345 ಜನರು ಮಾತ್ರ ಯೋಜನೆ ಸದ್ಬಳಕೆ ಮಾಡಿಕೊಂಡಿದ್ದಾರೆ. ಯಳಂದೂರು ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ 143 ಜನರು ಸಾಲವನ್ನು ಪಡೆದುಕೊಂಡಿದ್ದು, 143 ಜನರು ಕೂಡ ಯೋಜನೆಯ ಸದುಪಯೋಗ ಮಾಡಿಕೊಂಡಿದ್ದಾರೆ. ಹನೂರು ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ 191 ಜನರು ಸಾಲವನ್ನು ಪಡೆದುಕೊಂಡಿದ್ದು, 159 ಜನರು ಸೂಕ್ತ ರೀತಿಯಲ್ಲಿ ಸಾಲ ಮರುಪಾವತಿ ಮಾಡುತ್ತಿದ್ದಾರೆ.

ಒಟ್ಟಾರೆಯಾಗಿ ಜಿಲ್ಲೆಯಲ್ಲಿ 3001 ಬೀದಿಬದಿ ವ್ಯಾಪಾರಿಗಳು ಪಿಎಂ ಸ್ವನಿಧಿ ಯೋಜನೆಯಡಿ ಸಣ್ಣ ಸಾಲವನ್ನು ಪಡೆದುಕೊಂಡಿದ್ದು, 2748 ಜನರು ಇದರ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಪಿಎಂ ಸ್ವನಿಧಿ ಯೋಜನೆ ಶೇ.92 ರಷ್ಟು ಸಾಧನೆಯಾಗಿದ್ದು, 257 ಜನರು ಸೂಕ್ತ ರೀತಿಯಲ್ಲಿ ಸಾಲವನ್ನು ಮರುಪಾವತಿ ಮಾಡಿದ್ದೇ ಆದಲ್ಲಿ ನೂರರಷ್ಟು ಸಾಧನೆಯಾಗುತ್ತದೆ.

ಯೋಜನೆಯ ಸದುಪಯೋಗ:
ಈಗಾಗಲೇ ಪಿಎಂ ಸ್ವನಿಧಿ ಯೋಜನೆಯಡಿ ಸಾಲವನ್ನು ಪಡೆದಿರುವ ಹೆಚ್ಚಿನ ಜನರು ಯೋಜನೆಯ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಯೋಜನೆಯ ಮೂರನೇ ಹಂತದ ಸಾಲ ಪ್ರಕ್ರಿಯೆಯಲ್ಲಿ ಕೇವಲ 215 ಬೀದಿಬದಿ ವ್ಯಾಪಾರಿಗಳನ್ನು ಮಾತ್ರ ಟಾರ್ಗೆಟ್ ಮಾಡಲಾಗಿತ್ತು. ಆದರೆ ಮೂರನೇ ಹಂತದಲ್ಲಿ 50 ಸಾವಿರ ರೂ, ಸಾಲ ಪಡೆಯಲು 259 ಅರ್ಜಿಗಳು ವಿವಿಧ ಬ್ಯಾಂಕ್‌ಗಳಿಗೆ ಬಂದಿದ್ದವು. ಅದರಲ್ಲಿ ಈಗಾಗಲೇ 206 ಜನರಿಗೆ ಸಾಲ ಮಂಜೂರು ಆಗಿದ್ದು, 195 ಜನರ ಖಾತೆಗೆ ಹಣವೂ ವರ್ಗಾವಣೆಯಾಗಿದೆ. ಉಳಿದ 11 ಜನರಿಗೆ ಹಣ ಬರಬೇಕಾಗಿದೆ. ಈ ಯೋಜನೆಯಡಿ ಬ್ಯಾಂಕ್‌ಗಳು ಕೂಡ ಸುಲಭ ರೀತಿಯಲ್ಲಿ ಸಾಲ ನೀಡುತ್ತಿರುವುದರಿಂದ ವ್ಯಾಪಾರಿಗಳು ಸೂಕ್ತ ರೀತಿಯಲ್ಲಿ ಹಣ ಕಟ್ಟುತ್ತಿದ್ದಾರೆ. ಹಲವಾರು ಜನರು ವ್ಯಾಪಾರದಲ್ಲಿ ಪ್ರಗತಿಯನ್ನು ಸಾಧಿಸುತ್ತಿದ್ದಾರೆ. ಡಿಜಿಟಲ್ ಮೂಲಕ ಹಣ ಪಾವತಿ ಮಾಡುವುದಕ್ಕೆ ಅವಕಾಶ ಇರುವುದರಿಂದ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತಿದ್ದು, ವ್ಯಾಪಾರಿಗಳಿಗೆ ಸಾಲ ಹಿಂದಿರುಗಿಸಲು ಅನುಕೂಲವಾಗುತ್ತಿದೆ. ಈ ನಿಟ್ಟಿನಲ್ಲಿ ಪಿಎಂ ಸ್ವನಿಧಿ ಯೋಜನೆ ಬೀದಿಬದಿ ವ್ಯಾಪಾರಿಗಳ ಆರ್ಥಿಕ ಸ್ವಾವಲಂಬನೆಗೆ ಅತ್ಯಂತ ಸಹಕಾರವಾಗುತ್ತಿದೆ.

ಏನಿದು ಸ್ವನಿಧಿ ಯೋಜನೆ?:
ಬೀದಿ ಬದಿ ಮತ್ತು ಸಣ್ಣ ವ್ಯಾಪಾರಿಗಳನ್ನು ಮೀಟರ್ ಬಡ್ಡಿ ಮಾಫಿಯಾದಿಂದ ಕಾಪಾಡುವ ಉದ್ದೆಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪಿಎಂ ಸ್ವನಿಧಿ ಯೋಜನೆಯನ್ನು ಪರಿಚಯಿಸಿತ್ತು. ಈ ಯೋಜನೆಯಡಿ ಬೀದಿಬದಿಯ ವ್ಯಾಪಾರಿಗಳಿಗೆ 10 ಸಾವಿರ ರೂ, ಸಾಲ ಸಿಗಲಿದ್ದು, ಇದನ್ನು ಒಂದು ವರ್ಷದಮಾಸಿಕ ಕಂತುಗಳಲ್ಲಿ ತೀರಿಸಬೇಕಾಗುತ್ತದೆ. ಅದನ್ನು ಸೂಕ್ತ ಸಮಯದಲ್ಲಿ ತೀರಿಸಿದ್ದೆ ಆದಲ್ಲಿ ಎರಡನೇ ಹಂತದಲ್ಲಿ 20 ಸಾವಿರ ರೂ, ಹಾಗೂ ಮೂರನೇ ಹಂತದಲ್ಲಿ 50 ಸಾವಿರ ರೂ, ವರೆಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ. ಅವಧಿಯೊಳಗೆ ಮರುಪಾವತಿ ಮಾಡುವವರಿಗೆ ಬಡ್ಡಿಯಲ್ಲಿ ಶೇ.7 ರಷ್ಟು ಸಬ್ಸಿಡಿ ನೀಡಲಾಗುತ್ತದೆ ಹಾಗೂ ಸಾಲವನ್ನು ಏರಿಕೆ ಮಾಡಲಾಗುತ್ತದೆ. ಇದರಲ್ಲಿ ತ್ರೈಮಾಸಿಕ ಪಾವತಿಗೂ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಡಿಜಿಟಲ್ ವಹಿವಾಟಿನ ಮೇಲೆ ಮಾಸಿಕ ಪ್ರೋತ್ಸಾಹ ಕ್ಯಾಶ್‌ಬ್ಯಾಕ್ ಕೂಡ ದೊರೆಯುವ ಅವಕಾಶಗಳು ಇದೆ. ಈ ನಿಟ್ಟಿನಲ್ಲಿ ಬೀದಿ ಬದಿ ವ್ಯಾಪಾರಿಗಳು ಸೂಕ್ತ ರೀತಿಯಲ್ಲಿ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.

ಚಾ.ನಗರ ನಗರಸಭೆ ಶೇ.100 ರಷ್ಟು ಸಾಧನೆ:
ಪಿಎಂ ಸ್ವನಿಧಿ ಯೋಜನೆಯನ್ನು ಬೀದಿಬದಿ ವ್ಯಾಪಾರಿಗಳಿಗೆ ಉತ್ತಮ ರೀತಿಯಲ್ಲಿ ತಲುಪಿಸುವ ನಿಟ್ಟಿನಲ್ಲಿ ಚಾ.ನಗರ ಸಭೆ ಶೇ.100 ರಷ್ಟು ಸಾಧನೆ ಮಾಡಿದೆ. ಅದರ ಜತೆಗೆ ಯಳಂದೂರು ತಾಲೂಕು ಪಂಚಾಯಿತಿ ಕೂಡ ನೂರರಷ್ಟು ಸಾಧನೆ ಮಾಡಿದೆ. ಬೀದಿಬದಿ ವ್ಯಾಪಾರಿಗಳು ಸ್ವಾಲಂಬನೆಯಿಂದ ಬದುಕಲು ನೆರವಾಗುವ ನಿಟ್ಟಿನಲ್ಲಿ ಈ ಯೋಜನೆ ಸದುಪಯೋಗವಾಗುತ್ತಿದೆ. ಇದರಲ್ಲಿ ವಿವಿಧ ವಾಣಿಜ್ಯ ಬ್ಯಾಂಕ್‌ಗಳು, ಗ್ರಾಮೀಣ ಬ್ಯಾಂಕ್‌ಗಳು, ಸಣ್ಣ ಹಣಕಾಸು ಬ್ಯಾಂಕ್‌ಗಳು ಹಾಗೂ ಸ್ವಸಹಾಯ ಬ್ಯಾಂಕ್‌ಗಳ ಸಹಕಾರವು ದೊಡ್ಡದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net