

ಚಾಮರಾಜನಗರ: ಪ್ರಸ್ತುತ ದಿನಗಳಲ್ಲಿ ಹೆಚ್ಚಾಗುತ್ತಿರುವ ಪಾಶ್ಚಿಮಾತ್ಯ ಸಂಸ್ಕೃತಿಯಿಂದ ರಂಗಭೂಮಿ ಮತ್ತು ನಾಟಕ ಕಲೆ ನಶಿಸುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕಾಡಾಧ್ಯಕ್ಷ ಪಿ.ಮರಿಸ್ವಾಮಿ ಆತಂಕ ವ್ಯಕ್ತಪಡಿಸಿದರು.
ನಗರದ ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಚೇತನ ಕಲಾವಾಹಿನಿ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಪೌರಾಣಿಕ ನಾಟಕೋತ್ಸವ ಮತ್ತು ರಂಗಕಲಾವಿದರಿಗೆ ರಂಗರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಚಾಮರಾಜನಗರ, ಮಂಡ್ಯ, ಮೈಸೂರು ಹಾಗೂ ಇನ್ನಿತರೆ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಂಗ ಕಲಾವಿದರು ಇರುವುದರಿಂದ ಮಾತ್ರ ನಾಟಕಗಳು ಜೀವಂತವಾಗಿ ಉಳಿದುಕೊಂಡಿವೆ. ಒಳ್ಳೆಯ ಕಲಾವಿದರ ಬರಬೇಕಾದರೆ, ಅದು ರಂಗಭೂಮಿಯಿಂದ ಮಾತ್ರ ಸಾಧ್ಯ. ಡಾ.ರಾಜ್‌ಕುಮಾರ್ ಕೂಡ ರಂಗಭೂಮಿಯ ಕಲಾವಿದರಾಗಿದ್ದು, ಚಿತ್ರರಂಗದಲ್ಲಿ ದೊಡ್ಡಮಟ್ಟದಲ್ಲಿ ಹೆಸರು ಮಾಡಿದರು ಎಂದರು.
ಈ ಸಂದರ್ಭದಲ್ಲಿ ರಂಗಭೂಮಿ ಕಲಾವಿದರಾದ ಎಂ.ಸಿ.ಮಲ್ಲೇದೇವರು, ಎಚ್.ಎಲ್.ಬಂಗಾರು, ಪುಟ್ಟಣ್ಣ, ದಶಪಾಲ್, ವೆಂಕಟೇಶ್, ಲೋಕೇಶ್, ಡಾ.ಪಂಡಿತ್ ರಾಜಶೇಖರ್, ದೊರೆಸ್ವಾಮಿ, ಗೋವಿಂದರಾಜು, ಸಿ.ರಾಮಯ್ಯ ಅವರಿಗೆ ಕೆ.ಆರ್.ಶ್ರೀನಿವಾಸಯ್ಯ ರಂಗರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಸಿದ್ಧಮಲ್ಲೇಶ್ವರ ವಿರಕ್ತಮಠದ ಶ್ರೀಚನ್ನಬಸವಸ್ವಾಮೀಜಿ, ಮರಿಯಾಲ ಮಠದ ಶ್ರೀಇಮ್ಮಡಿ ಮುರುಘರಾಜೇಂದ್ರಸ್ವಾಮೀಜಿ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಮಂಜುನಾಥಪ್ರಸನ್ನ, ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್, ಸ್ವರ್ಣಲಂ, ಶ್ರೀನಿವಾಸಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಗ್ರಾ.ಪಂ.ಅಧ್ಯಕ್ಷ ಶೇಖರಪ್ಪ, ಪಶುಸಂಗೋಪನಾ ನಿವೃತ್ತ ಅಧಿಕಾರಿ ಡಾ. ಸುಗಂಧರಾಜ್, ನಾಟಕ ನಿರ್ದೇಶಕ ಆರ್.ಶಿವಣ್ಣ ಮಂಗಲ, ಚೇತನ ಕಲಾವಾಹಿನಿ ಅಧ್ಯಕ್ಷ ಜಿ.ರಾಜಪ್ಪ, ಕಾರ್ಯದರ್ಶಿ ಎಂ.ಮಂಜುನಾಥ್, ರೇವಣ್ಣ ಹಾಗೂ ಇತರರು ಹಾಜರಿದ್ದರು.