ದೌರ್ಜನ್ಯ ಪ್ರಕರಣಗಳನ್ನು ನ್ಯಾಯಸಮ್ಮತವಾಗಿ ಬಗೆಹರಿಸಿ

25rajesh1
Published on

ಚಾಮರಾಜನಗರ: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ದೌರ್ಜನ್ಯ ಪ್ರಕರಣಗಳಲ್ಲಿ ಪರಿಹಾರ ವಿತರಿಸಿದರಷ್ಟೆ ಸಾಲದು, ದೌರ್ಜನ್ಯದಿಂದ ನೊಂದ ಸಂತ್ರಸ್ಥರಿಗೆ ಸಾಮಾಜಿಕ ನ್ಯಾಯ ಒದಗಿಸಲು ಅಧಿಕಾರಿಗಳು ಮುಂದಾಗುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ದೌರ್ಜನ್ಯ ಪ್ರಕರಣಗಳ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡಿದರು.

ಪ್ರಸ್ತುತ 2024ರ ಜನವರಿಯಿಂದ ಇದುವರೆಗೆ ಚಾಮರಾಜನಗರ ತಾಲೂಕಿನಲ್ಲಿ 4, ಕೊಳ್ಳೇಗಾಲ 3, ಹನೂರು 8, ಗುಂಡ್ಲುಪೇಟೆ 1 ಹಾಗೂ ಯಳಂದೂರು ತಾಲೂಕಿನಲ್ಲಿ 2 ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 18 ಎಸ್ಸಿ/ಎಸ್ಟಿ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 16 ಪ್ರಕರಣಗಳಿಗೆ 25 ಲಕ್ಕಕ್ಕೂ ಹೆಚ್ಚಿನ ಪರಿಹಾರ ಒದಗಿಸಲಾಗಿದ್ದು, ಉಳಿದ 2 ಪ್ರಕರಣಗಳನ್ನು ಇತ್ಯರ್ಥಪಡಿಸಿ ಸದ್ಯದಲ್ಲಿಯೇ ಪರಿಹಾರ ಒದಗಿಸಲಾಗುವುದು ಎಂದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ದೌರ್ಜನ್ಯ ಪ್ರಕರಣಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವಿಳಂಬ ಮಾಡದೇ ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿ ಪ್ರಕರಣಕ್ಕೆ ನ್ಯಾಯ ಒದಗಿಸಬೇಕು. ಸಭೆಯಲ್ಲಿ ಕೈಗೊಳ್ಳುವ ನಿರ್ಧಾರಗಳನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರಬೇಕು. ದೌರ್ಜನ್ಯ ಪ್ರಕರಣಗಳು ಸಾಮಾಜಿಕ ಹಾಗೂ ಮಾನವ ಹಕ್ಕು ಉಲ್ಲಂಘನೆಯಾಗಲಿವೆ. ಅತ್ಯಾಚಾರ, ಹಲ್ಲೆ, ಜಾತಿನಿಂದನೆ ಪ್ರಕರಣಗಳನ್ನು ತ್ವರಿತ, ನ್ಯಾಯ ಸಮ್ಮತವಾಗಿ ಬಗೆಹರಿಸಬೇಕು. ಯಾವುದೇ ಪ್ರಕರಣ ಬಾಕಿ ಉಳಿಯಬಾರದು. ಅಗತ್ಯವಿದ್ದರೆ ಪೊಲೀಸ್ ಸಹಕಾರ ಪಡೆಯಬೇಕೆಂದು ಹೇಳಿದರು.

ಹನೂರು ತಾಲೂಕಿನ ಸುಳ್ವಾಡಿ ದುರಂತದಲ್ಲಿ ಅಸ್ವಸ್ಥಗೊಂಡಿದ್ದ 12 ಕುಟುಂಬಗಳ 114 ಜನರಿಗೆ ಡಿ.ಎಂ.ಎಫ್ ಅನುದಾನದಿಂದ ಪೌಷ್ಠಿಕ ಆಹಾರದ ಕಿಟ್‌ಗಳನ್ನು ಸರಬರಾಜು ಮಾಡುತ್ತಿದ್ದು, ಇತರೆ ಸೌಲಭ್ಯಗಳನ್ನು ನಿರಂತರವಾಗಿ ಒದಗಿಸಬೇಕು. ನರೇಗಾ ಯೋಜನೆಯಡಿ ಜಾಬ್‌ಕಾರ್ಡ್ ಇಲ್ಲದವರಿಗೆ ಅಗತ್ಯ ವ್ಯವಸ್ಥೆ ಮಾಡಿ ಉದ್ಯೋಗ ಕಲ್ಪಿಸಬೇಕು. ಸರ್ಕಾರಿ ಸೌಲಭ್ಯ ಉದ್ದೇಶಕ್ಕಾಗಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿರುವವರ ಬಗ್ಗೆ ಪರಿಶೀಲಿಸಿ ಅಂತಹವರ ಮೇಲೆ ಪ್ರಕರಣ ದಾಖಲಿಸುವ ಕೆಲಸ ಆಗಬೇಕು ಎಂದು ತಾಕೀತು ಮಾಡಿದರು.

ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡದ ಸೋಲಿಗರು ಹೆಚ್ಚಾಗಿ ವಾಸಿಸುತ್ತಿದ್ದು, ವಾಸಯೋಗ್ಯ ಮನೆಗಳು ಇಲ್ಲವಾಗಿವೆ. ಕಾಡುಪ್ರಾಣಿ ಹಾವಳಿ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಸೋಲಿಗರಿಗೆ ಮನೆ ನೀಡುವ ಸಂಬಂಧ ಎಲ್ಲಾ ತಾಲೂಕುಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಒಟ್ಟು 2930 ಮನೆಗಳ ನಿರ್ಮಾಣಕ್ಕಾಗಿ ಮುಖ್ಯಮಂತ್ರಿಗಳು ಹಾಗೂ ಉಸ್ತುವಾರಿ ಕಾರ್ಯದರ್ಶಿಯವರಿಗೆ ಅಗತ್ಯ ಪ್ರಸ್ತಾವನೆಯನ್ನು ಶೀಘ್ರವಾಗಿ ಸಲ್ಲಿಸಲಾಗುತ್ತಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಜಾಗೃತಿ ಹಾಗೂ ಉಸ್ತುವಾರಿ ಸಮಿತಿ ಸಭೆಯ ಸದಸ್ಯ ಆರ್.ಸಿದ್ದರಾಜು, ಮುದ್ದಯ್ಯ, ಸಿದ್ದರಾಜು, ಸೋಮೇಶ್ವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾಹುಡೇದ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜು, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕೆ.ಮಂಜುಳ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net