

ಚಾಮರಾಜನಗರ : ಶ್ರೀ ಚಾಮರಾಜೇಶ್ವರಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನೆರವೇರಲು ಹಾಗೂ ರಥೋತ್ಸವದ ಬಳಿಕ ಸ್ವಚ್ಛತೆ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಅಪಾರ ಎಂದು ಸಮಾಜ ಸೇವಕ ಸುರೇಶ್ ಗೌಡ ತಿಳಿಸಿದರು.
ಡಾ.ಪರಮೇಶ್ವರಪ್ಪ ಸ್ನೇಹ ಬಳಗ ಹಾಗೂ ರವಿಸಂತು ಬಳಗದ ಸಹಯೋಗದಲ್ಲಿ ಶುಕ್ರವಾರ ನಗರದ ತಹಸೀಲ್ದಾರ್ ಕಚೇರಿ ಮುಂಭಾಗ ಸುಮಾರು 20 ಕ್ಕೂ ಹೆಚ್ಚು ಮಹಿಳಾ ಪೌರಕಾರ್ಮಿಕರಿಗೆ ಉಚಿತವಾಗಿ ಸೀರೆ ವಿತರಣೆ ಮಾಡಿ ಮಾತನಾಡಿದರು. ನಗರಸಭೆ ವ್ಯಾಪ್ತಿಯಲ್ಲಿರುವ ಮಹಿಳಾ ಪೌರಕಾರ್ಮಿಕರು ಸಾಕಷ್ಟು ಶ್ರಮವಹಿಸಿ ಕೆಲಸ ಮಾಡುತ್ತಾರೆ. ನಾವು ಮುಂಜಾನೆ ಎಚ್ಚರವಾಗುವ ಮುನ್ನವೇ ಅವರ ಕರ್ತವ್ಯ ಶುರುವಾಗಿರುತ್ತದೆ. ಅವರು ಉತ್ತಮ ರೀತಿಯಲ್ಲಿ ಕೆಲಸ ಮಾಡುವುದರಿಂದ ನಾವು ಆರೋಗ್ಯಪೂರ್ಣವಾಗಿ ಇದ್ದೇವೆ. ಅವರ ಸೇವೆಯನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಮಹಿಳಾ ಪೌರಕಾರ್ಮಿಕರನ್ನು ಅಭಿನಂದಿಸಲಾಗಿದೆ ಎಂದು ತಿಳಿಸಿದರು. ನಗರಸಭೆ ಆರೋಗ್ಯಾಧಿಕಾರಿ ಮಹದೇವಸ್ವಾಮಿ, ಸಮಾಜ ಸೇವಕ ಡಾ.ಪರಮೇಶ್ವರಪ್ಪ, ಹಸಿರು ಪಡೆ ಸತೀಶ್ ಇತರರು ಹಾಜರಿದ್ದರು.