ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಎಸ್ಪಿ ಪ್ರತಿಭಟನೆ

26rajesh3 (1)
Published on

ಚಾಮರಾಜನಗರ: ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಅಭಿವೃದ್ಧಿಗಾಗಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಮೀಸಲಿಟ್ಟಿರುವ ಅನುದಾನವನ್ನು ಕಾಂಗ್ರೆಸ್ ಸರ್ಕಾರ ಬೇರೆ ಉದ್ದೇಶಗಳಿಗೆ ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.

ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಮೂಲಕ ಸಾಗಿ ಶ್ರೀ ಭುವನೇಶ್ವರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ೋಷಣೆಗಳನ್ನು ಕೂಗಿ ಆಕ್ರೋಶವ್ಯಕ್ತಪಡಿಸಿದರು. ಬಳಿಕ ಬಿ.ರಾಚಯ್ಯ ಜೋಡಿರಸ್ತೆ ಮಾರ್ಗವಾಗಿ ಜಿಲ್ಲಾಡಳಿತ ಭವನಕ್ಕೆ ತೆರಳಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಬಿಎಸ್ಪಿ ರಾಜ್ಯ ಉಸ್ತುವಾರಿ ಎಂ.ಕೃಷ್ಣಮೂರ್ತಿ ಮಾತನಾಡಿ, 2014-15 ನೇ ಸಾಲಿನಿಂದ ಇಲ್ಲಿಯವರೆಗೂ 2,94,963 ಕೋಟಿ ರೂ.ಗಳನ್ನು ಎಸ್ಸಿ, ಎಸ್ಟಿ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಆದರೆ ಈ ಪೈಕಿ ಕೇವಲ ಶೇ.10 ರಷ್ಟು ಹಣವನ್ನೂ ಎಸ್ಸಿ, ಎಸ್ಪಿಗಳಿಗೆ ನೇರವಾಗಿ ತಲುಪಿಸದೆ ಸರ್ಕಾರ ದ್ರೋಹವೆಸಗಿದೆ. 2023-24 ಮತ್ತು 2024-25ನೇ ಸಾಲಿನಲ್ಲಿ 25,398 ಕೋಟಿ ರೂ. ಗಳನ್ನು ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿದೆ ಎಂದು ದೂರಿದರು.

ಉಚಿತ ಶಿಕ್ಷಣ ನೀಡಬಹುದಿತ್ತು: ಸರ್ಕಾರದ ಅಂಕಿ-ಅಂಶಗಳ ಪ್ರಕಾರ ಇದುವರೆಗೂ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಸರ್ಕಾರಗಳು ಸುಮಾರು 70 ಸಾವಿರ ಕೋಟಿ ರೂ. ದುರ್ಬಳಕೆ ಮಾಡಿಕೊಂಡಿವೆ. 2014-15 ರಿಂದ ಇದುವರೆಗೂ ಮೀಸಲಿಟ್ಟ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನದ ಹಣದಿಂದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗೆ ಹಾಗೂ ಬಿ.ಇ, ಎಂಬಿಬಿಎಸ್, ಪಿಎಚ್.ಡಿವರೆಗೆ ಗುಣಮಟ್ಟದ, ಉಚಿತ ಶಿಕ್ಷಣ ನೀಡಬಹುದಿತ್ತು. ಆದರೆ ಕಾಂಗ್ರೆಸ್ ಸರ್ಕಾರ ದಲಿತರಿಗೆ ಅನ್ಯಾಯವೆಸಗುತ್ತಿದೆ ಎಂದು ಎಂ.ಕೃಷ್ಣಮೂರ್ತಿ ಕಿಡಿಕಾರಿದರು.

ಸ್ಕಾಲರ್‌ಶಿಪ್ ನಿರಾಕರಣೆ: ರಾಜ್ಯ ಸರ್ಕಾರ ಎಸ್ಸಿಪಿ/ಟಿಎಸ್ಪಿ ಅನುದಾನವನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿದ್ದರೆ, ಎಸ್ಸಿ, ಎಸ್ಟಿ ನಿರುದ್ಯೋಗಿ ಯುವಜನತೆಗೆ ಸ್ವಯಂ ಉದ್ಯೋಗ, ವಸತಿರಹಿತ ಕುಟುಂಬಗಳಿಗೆ ಸ್ವಂತ ಮನೆ, ಭೂರಹಿತ ಕೃಷಿ ಕಾರ್ಮಿಕರಿಗೆ ತಲಾ 5 ಎಕರೆ ಕೃಷಿ ಜಮೀನು ಖರೀದಿ, ಅತಿ ಬಡ ರೋಗಿಗಳಿಗೆ ಉಚಿತವಾಗಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ಕೊಡಿಸಿ ಪ್ರಾಣ ಉಳಿಸಬಹುದಿತ್ತು. ಆದರೆ ದಲಿತರ ಅಭಿವೃದ್ಧಿ ಮಾಡುವ ಮೊದಲು ಈಗಾಗಲೇ ಚಾಲ್ತಿಯಲ್ಲಿದ್ದ ಅನೇಕ ಯೋಜನೆಗಳನ್ನು ಸರ್ಕಾರ ರದ್ದುಗೊಳಿಸಿದೆ. ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಪ್ರೋತ್ಸಾಹಧನ ರದ್ದುಪಡಿಸಿದೆ. ಪ್ರಬುದ್ಧ ಯೋಜನೆ ಅಡಿಯಲ್ಲಿ ವಿದೇಶಗಳಲ್ಲಿ ಪಿಎಚ್.ಡಿ ಮಾಡಲು ಸ್ಕಾಲರ್‌ಶಿಪ್ ನಿರಾಕರಿಸಿದೆ. ಶಾಲಾ- ಕಾಲೇಜುಗಳಲ್ಲಿ ಪ್ರಾರಂಭದಲ್ಲೇ ಪೂರ್ಣ ಶುಲ್ಕ ಪಾವತಿಸುವಂತಾಗಿದೆ. ಕಾಲಕಾಲಕ್ಕೆ ಎಸ್ಸಿ, ಎಸ್ಟಿಗಳಿಗೆ ವಿದ್ಯಾರ್ಥಿವೇತನ ಸಿಗುತ್ತಿಲ್ಲ ಎಂದು ಎಂ.ಕೃಷ್ಣಮೂರ್ತಿ ದೂರಿದರು.

ಪ್ರತಿಭಟನೆಯಲ್ಲಿ ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಹ.ರಾ.ಮಹೇಶ್, ಜಿಲ್ಲಾಧ್ಯಕ್ಷ ಎನ್.ನಾಗಯ್ಯ, ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ, ಪ್ರಧಾನ ಕಾರ್ಯದರ್ಶಿ ಬ.ಮ.ಕೃಷ್ಣಮೂರ್ತಿ, ಸಂಯೋಜಕ ಪ್ರಕಾಶ್, ತಾಲೂಕು ಅಧ್ಯಕ್ಷ ಚಂದ್ರಕಾಂತ್, ಗ್ರಾ.ಪಂ ಸದಸ್ಯರಾದ ದ್ಯಾವಲಪುರ ಶಿವಣ್ಣ, ಬಾಲರಾಜ್, ಅಲೋಕ್, ಮುಖಂಡರಾದ ದೊಡ್ಡರಾಯಪೇಟೆ ಕೃಷ್ಣಮೂರ್ತಿ, ರಾಜಶೇಖರ್, ರಂಗಸ್ವಾಮಿ, ಬಸವರಾಜು, ಅಭಿ, ಸಿದ್ದರಾಜು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net