ಮಕ್ಕಳಿಗೆ ಕಲಿಕೆಯ ಹಂತ ಬಹುಮುಖ್ಯ

26rajesh4
Published on

ಚಾಮರಾಜನಗರ: ವಿದ್ಯಾರ್ಥಿ ಜೀವನದಲ್ಲಿ ಕಲಿಕೆ ಹಂತ ಬಹುಮುಖ್ಯ ಎಂದು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ವಿಭಾಗದ ಉಪ ನಿರ್ದೇಶಕ ಮಂಜುನಾಥ ಪ್ರಸನ್ನ ಹೇಳಿದರು.

ತಾಲೂಕಿನ ಮರಿಯಾಲ ಗ್ರಾಮದ ಶ್ರೀಮುರುಘ ರಾಜೇಂದ್ರಸ್ವಾಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ 2024-25 ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ವೇದಿಕೆ ಉದ್ಘಾಟನೆ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವುದರ ಮೂಲಕ ತಮ್ಮ ಪ್ರತಿಭೆಯನ್ನು ಆನಾವರಣಗೊಳಿಸಬೇಕು. ವಿದ್ಯಾಸಂಸ್ಥೆಯಲ್ಲಿ ಉತ್ತಮ ಅಂಕ ಗಳಿಸುವುದರ ಜತೆಗೆ ಉಪನ್ಯಾಸಕರ ಶ್ರಮವನ್ನು ವಿನಿಯೋಗಿಸುವುದರ ಮೂಲಕ ಒಳ್ಳೆಯ ವ್ಯಕ್ತಿಯಾಗಿ ರೂಪುಗೊಳ್ಳಬೇಕೆಂದು ತಿಳಿಸಿದರು.

ಶಿಸ್ತು ಮುಖ್ಯ: ಜೆಎಸ್‌ಎಸ್ ಬಿಇಡಿ ಕಾಲೇಜಿನ ಪ್ರಾಂಶುಪಾಲ ಮತ್ತು ಚಾಮರಾಜನಗರ ವಿವಿ ಸಿಂಡಿಕೇಟ್ ಸದಸ್ಯ ಡಾ.ಕೆ.ಎಂ.ಬಸವಣ್ಣ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಶಿಸ್ತು ಎನ್ನುವುದು ಮುಖ್ಯ. ಅಂಕಗಳಷ್ಟೇ ನಿಮ್ಮ ಪ್ರತಿಭೆಗಳನ್ನು ಗುರುತಿಸುವುದಿಲ್ಲ. ನಿಮ್ಮಲ್ಲಿನ ಪ್ರತಿಭೆಯನ್ನು ಹೊರ ತರುವುದು ನಿಮ್ಮ ಜವಾಬ್ದಾರಿ ಹಾಗೂ ಈಗಿನ ಶಿಕ್ಷಣದ ವ್ಯವಸ್ಥೆ ಬಹಳಷ್ಟು ಕಾಲಕ್ಕೆ ತಕ್ಕಂತೆ ಬದಲಾವಣೆ ಹೊಂದಿದ್ದು, ವಿದ್ಯಾರ್ಥಿಗಳಲ್ಲಿ ಕಲಿಯುವ ಹಂಬಲ ಕೇವಲ ಅಂಕಗಳಿಗಷ್ಟೇ ಸೀಮಿತವಾಗಿದೆ. ಆದ್ದರಿಂದ ಶಿಕ್ಷಣದ ಜತೆಗೆ ನೈತಿಕ ಶಿಕ್ಷಣ ಸಂಸ್ಕಾರ ನಡೆ-ನುಡಿ ವಿಧಾನಗಳನ್ನು ಕಲಿಯುವಂತಾಗಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ನುಡಿದರು.

ಬಹುಮಾನ:
ಸಂಸ್ಥೆಯ ಆಡಳಿತಾಧಿಕಾರಿ ಆರ್.ಡಿ.ನಾಗರಾಜು ಮಾತನಾಡಿ, ಕಳೆದ ಬಾರಿ ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಮತ್ತು ಶೇ.100ರಷ್ಟು ಫಲಿತಾಂಶ ನೀಡಿದ ಉಪನ್ಯಾಸಕರಿಗೆ ಬಹುಮಾನ ನೀಡಿ ಸನ್ಮಾನಿಸಿದರು. ಇದೇ ವೇಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪ್ರಾಂಶುಪಾಲ ಪಿ.ಮಹದೇವಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಸಂಸ್ಥೆ ಉಪಾಧ್ಯಕ್ಷ ಕುಮಾರಸ್ವಾಮಿ, ಮುಖ್ಯಶಿಕ್ಷಕ ಗಿರೀಶ್, ಸಂಸ್ಕೃತ ಪಾಠಶಾಲೆ ಮುಖ್ಯಶಿಕ್ಷಕ ನಾಗೇಂದ್ರ, ಹಾಗೂ ಕಾಲೇಜಿನ ಉಪನ್ಯಾಸಕರು ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net