

ಚಾಮರಾಜನಗರ: ಉನ್ನತ ಶ್ರೇಣಿಯಲ್ಲಿ ಪ್ರಥಮ ಬಾರಿಗೆ ತೇರ್ಗಡೆಯಾದ ಪರಿಶಿಷ್ಟ ಜಾತಿಯ ಪ್ರತಿಭಾವಂತ ವಿರ್ದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಯೋಜನೆ ಮುಂದುವರಿಸುವಂತೆ ಒತ್ತಾಯಿಸಿ ರಾಜ್ಯ ಛಲವಾದಿ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾ ಸಮಿತಿ ವತಿಯಿಂದ ಬುಧವಾರ ಮನವಿ ಸಲ್ಲಿಸಲಾಯಿತು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಹೆಚ್ಚುವರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಡಿಸಿ ಗೀತಾ ಹುಡೇದ ಅವರ ಮೂಲಕ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಲಾಯಿತು. ಪರಿಶಿಷ್ಟ ಜಾತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ಪಿ.ಎಚ್‌ಡಿ ಹಾಗೂ ವಿದೇಶದಲ್ಲಿ ವ್ಯಾಸಂಗ ಮಾಡುವವರಿಗೂ ಸಮಾಜ ಕಲ್ಯಾಣ ಇಲಾಖೆವತಿಯಿಂದ ಮೊದಲ ಪ್ರಯತ್ನದಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಯೋಜನೆ ಜಾರಿಯಲ್ಲಿದೆ. ಇತ್ತೀಚೆಗೆ ಸಮಾಜ ಕಲ್ಯಾಣ ಇಲಾಖೆ ಪ್ರೋತ್ಸಾಹ ಧನ ಯೋಜನೆಯನ್ನು ಕೆಲವು ನಿಬಂಧನೆಗಳನ್ನು ಹೊರಡಿಸಿ ರದ್ದುಮಾಡಿದೆ. ಆಗಾಗಿ ಹಿಂದಿನಂತೆ ಪ್ರೋತ್ಸಾಹ ಧನ ಯೋಜನೆ ಕಾರ್ಯಕ್ರಮವನ್ನು ಮುಂದುವರಿಸಬೇಕು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಛಲವಾದಿ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ಎಂ.ಶಿವನಾಗಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮಸುಂದರ್ ಮಲ್ಲಯ್ಯನಪುರ, ಸಂಘಟನಾ ಕಾರ್ಯದರ್ಶಿ ಬಿ.ರವಿ, ಸಿದ್ದರಾಜು, ನಿರ್ದೇಶಕ ಶಿವು ಹಾಜರಿದ್ದರು.