ಪರಿಸರ ಜಾಗೃತಿ, ಕಲೆಗೆ ಪ್ರೋತ್ಸಾಹ

059
Published on

ಚಾಮರಾಜನಗರ: ಎಲ್ಲರಲ್ಲೂ ಒಂದೊಂದು ರೀತಿಯ ಪ್ರತಿಭೆ ಅಡಗಿರುತ್ತದೆ. ಹಾಗಾಗಿ ಕಲೆ ಯಾರೋ ಒಬ್ಬರ ಸ್ವತ್ತು ಅಲ್ಲ ಎಂದು ನಗರಸಭೆ ಪೌರಾಯುಕ್ತ ಎಸ್.ವಿ.ರಾಮದಾಸ್ ಹೇಳಿದರು.

ನಗರದ ಬಂಜಾರ ಇಂಡಿಯನ್ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಕನ್ನಡದ ನಂ.1 ದಿನಪತ್ರಿಕೆ, ತೇಜಸ್ ಸೇವಾ ಸಂಸ್ಥೆ, ಪವನ್ ಸೇವಾ ಟ್ರಸ್ಟ್, ಐಸೆಟ್ ಸಂಸ್ಥೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಪರಿಸರ ಜಾಗೃತಿಗಾಗಿ ಚಿತ್ರಕಲೋತ್ಸವ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಶಾಲೆಯ ವಿದ್ಯಾರ್ಥಿ ಗೌತಮ್‌ರಾಜ್ ಖಾಸಗಿ ವಾಹಿನಿಯ ರಿಯಾಲಿಟಿ ಶೋನದಲ್ಲಿ ತನ್ನ ಪ್ರತಿಭೆ ಅನಾವರಣಗೊಳಿಸಿದ ಗೌತಮ್ ರಾಜ್ ಇತರರಿಗೂ ಮಾದರಿ. ಕಲೆಯನ್ನು ಖರೀದಿ ಮಾಡಲಾಗದು. ಅಂತೆಯೇ ಪರಿಸರ ಜಾಗೃತಿಯೂ ಒಂದು ಕಲೆ. ದಿನಬಳಕೆಯಲ್ಲಿ ಪ್ಲಾಸ್ಟಿಕ್ ತ್ಯಜಿಸಿ. ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಬುಟ್ಟಿಗೆ ಹಾಕಬೇಕು ಎಂದು ಕಿವಿಮಾತು ಹೇಳಿದರು.

ಬಿಜೆಪಿ ನಗರ ಮಂಡಲದ ಅಧ್ಯಕ್ಷ ನಾಗರಾಜ್ ಮಾತನಾಡಿ, ಪ್ಲಾಸ್ಟಿಕ್ ಬಳಕೆ ಮತ್ತು ಬೆಳೆಗಳಿಗೆ ಸಿಂಪಡಿಸುವ ರಾಸಾಯನಿಕದಿಂದ ಭೂಮಿ ಮಾಲಿನ್ಯವಾಗುತ್ತಿದೆ. ಪರಿಸರ ರಕ್ಷಣೆಯಲ್ಲಿ ಜಲ ಸಂರಕ್ಷಣೆ ಪ್ರಮುಖ ಪಾತ್ರವಹಿಸಿದೆ. ವಿದ್ಯಾರ್ಥಿಗಳು ಮನೆಗೊಂದು ಗಿಡ ನೆಟ್ಟು ಬೆಳೆಸಬೇಕು. ಇಸ್ರೋ ಚಂದ್ರಯಾನ-3ದ ಮೂಲಕ ದೇಶವೇ ಹೆಮ್ಮೆ ಪಡುವ ಕೆಲಸ ಮಾಡಿದೆ. ರಾಷ್ಟ್ರಪತಿ ಮಹಾತ್ಮಗಾಂಧಿ, ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು. ಇನ್ಪೋಸಿಸ್ ಸುಧಾಮೂರ್ತಿ ಅವರ ಸರಳತೆಯನ್ನು ಎಲ್ಲರೂ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

ಶಾಲೆಯ ಮುಖ್ಯಶಿಕ್ಷಕ ಎಂ.ಪ್ರದೀಪ್‌ಕುಮಾರ್ ಮಾತನಾಡಿ, ಪರಿಸರ ಜಾಗೃತಿ, ಕಲೆಯ ಪ್ರೋತ್ಸಾಹದ ಮೂಲಕ ವಿದ್ಯಾರ್ಥಿಗಳ ಉತ್ಸಾಹ ಹೆಚ್ಚಾಗಿದೆ ಎಂದು ಹೇಳಿದರು. ಇದೇ ವೇಳೆ ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಮಾಜಿ ಸದಸ್ಯ, ಚಿತ್ರ ಕಲಾವಿದ ದುಂಡು ಸ್ಥಳದಲ್ಲೇ ಚಿತ್ರ ಬಿಡಿಸಿ ಪ್ರಾತ್ಯಕ್ಷಿಕೆ ನೀಡಿದರು. ವಿದ್ಯಾರ್ಥಿಗಳು ಚಿತ್ರ ರಚನೆ ಮಾಡುವ ಬಗ್ಗೆ ತಿಳಿಸಿಕೊಟ್ಟರು. ಪವನ್ ಸೇನಾ ಟ್ರಸ್ಟ್‌ನ ಅಧ್ಯಕ್ಷ ಸಿ.ಎನ್.ಸಂಪತ್‌ಕುಮಾರ್, ನಾಗವಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಪ್ರಶಾಂತ್, ಚಿತ್ರಕಲಾವಿದರಾದ ಅನಿಲ್, ಲೋಕೇಶ್, ತೇಜಸ್ ಸಂಸ್ಥೆಯ ಅಧ್ಯಕ್ಷ ರವಿತೇಜ್ ಮತ್ತು ಶಾಲೆಯ ಶಿಕ್ಷಕರು ಹಾಜರಿದ್ದರು.

ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ:
ಚಿತ್ರಕಲಾ ಸ್ಪರ್ಧೆಯಲ್ಲಿ ಶಾಲೆಯ 8,9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿದರು. ಪರಿಸರ ಜಾಗೃತಿ ವಿಷಯದ ಕುರಿತು ಚಿತ್ರಗಳನ್ನು ಬಿಡಿಸಿದರು. ಭೂಮಿ, ಗಿಡ, ಮರ, ಪ್ರಕೃತಿಯ ಚಿತ್ರಗಳನ್ನು ಬಿಡಿಸಿ ಬಣ್ಣ ತುಂಬಿದರು. ಇವರಲ್ಲಿ 8ನೇ ತರಗತಿಯ ವಿ.ರೋಹಿಣಿ ಪ್ರಥಮ, 10ನೇ ತರಗತಿಯ ಎಸ್.ಯೋಗೇಶ್, ಮಹಶ್ವೇತೆ ತೃತೀಯ ಸ್ಥಾನ ಪಡೆದರು. ವಿಜೇತ ವಿದ್ಯಾರ್ಥಿಗಳಿಗೆ ಉಪ್ಪಾರ ಸಮಾಜದ ಮುಖಂಡ ಕೃಷ್ಣಕುಮಾರ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಆನಂದ್ ಭಗೀರಥ, ನಗರ ಮಂಡಲ ಅಧ್ಯಕ್ಷ ನಾಗರಾಜ್ ಮತ್ತು ಪೌರಾಯುಕ್ತ ಎಸ್.ವಿ.ರಾಮದಾಸ್ ಬಹುಮಾನ ವಿತರಣೆ ಮಾಡಿದರು.

ವಿಜಯವಾಣಿಗೆ ಮೆಚ್ಚುಗೆ:
ವಿಜಯವಾಣಿ ದಿನಪತ್ರಿಕೆ ಸುದ್ದಿ ಪ್ರಕಟಣೆಯೊಂದಿಗೆ ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡು ವಿದ್ಯಾರ್ಥಿಗಳಲ್ಲಿ ಚಿತ್ರಕಲಾ ಸ್ಪರ್ಧೆ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿರುವುದು ಅಭಿನಂದನಾರ್ಹ ಎಂದು ನಗರಸಭೆ ಪೌರಾಯುಕ್ತ ಎಸ್.ವಿ.ರಾಮದಾಸ್ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net