ಅನುಮತಿ ಪಡೆಯದೆ ಅನುದಾನ ಬಳಕೆ ಸರಿಯಲ್ಲ

Oplus_0
Oplus_0
Published on

ಯಳಂದೂರು: ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿನ ಡಯಾಲಿಸಿಸ್ ಕೇಂದ್ರಕ್ಕೆ ಉಪಕರಣಗಳ ಖರೀದಿ ಹಾಗೂ ಇತರ ಕಾಮಗಾರಿಗೆ ಹೆಚ್ಚುವರಿಯಾಗಿ 5.50 ಲಕ್ಷ ರೂ. ಅನುದಾನವನ್ನು ಅನುಮತಿ ಪಡೆಯದೆ, ನಿಯಮವನ್ನು ಗಾಳಿಗೆ ತೂರಿ ಬಳಕೆ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ತಾಲೂಕು ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಯನ್ನು ತರಾಟೆ ತಗೆದುಕೊಂಡರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ ಆಯೋಜಿಸಿದ್ದ ಆರೋಗ್ಯ ರಕ್ಷ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತಿದೆ. ಆದರೆ ಆಸ್ಪತ್ರೆಯಲ್ಲಿ ಹಣಕಾಸು ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಡಯಾಲಿಸಿಸ್ ಕೇಂದ್ರದ ಹೆಚ್ಚುವರಿ ಕಾಮಗಾರಿಗೆ ಸಮಿತಿಯ ಅನುಮತಿಯನ್ನು ಪಡೆದುಕೊಳ್ಳದೆ ನಿಯಮಗಳನ್ನು ಗಾಳಿಗೆ ತೂರಿ ಖುರ್ಚ ಮಾಡಬಾರದು. ಸಾರ್ವಜನಿಕರಿಗೆ ಉತ್ತಮ ಆರೋಗ್ಯ ನೀಡುವ ಸಂಬಂಧ ಮುಂದಿನ ಸಭೆಯಲ್ಲಿ ಅನುಮತಿ ಪಡೆದು ಕೆಲಸ ಮಾಡಬೇಕೆಂದು ಸೂಚಿಸಿದರು.

ತಾಲೂಕು ಆಸ್ಪತ್ರೆಗೆ ಸಿಎಂರಿಂದ ಭೂಮಿಪೂಜೆ: ಸಿದ್ಧರಾಮಯ್ಯ ಅವರು ನನ್ನ ತಂದೆ ಮೇಲಿನ ಅಭಿಮಾನದಿಂದ ಯಳಂದೂರು ಪಟ್ಟಣಕ್ಕೆ 100 ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ಕಳೆದ ಬಜೆಟ್‌ನಲ್ಲಿ ಹಣ ಮಂಜೂರು ಮಾಡಿದ್ದಾರೆ. ಒಟ್ಟು 36 ಕೋಟಿ ರೂ. ವೆಚ್ಚದಲ್ಲಿ ನೆಲಮಹಡಿ ಕಟ್ಟಡ ಕಾಮಗಾರಿ ಶೀಘ್ರ ಆರಂಭಗೊಳ್ಳಲಿದ್ದು, ಇಲ್ಲಿನ ಅನೇಕ ವರ್ಷಗಳ ಬೇಡಿಕೆ ಈಡೇರಲಿದೆ. ಈ ಸಂಬಂಧ ಟೆಂಡರ್ ಪ್ರಕ್ರಿಯೆಯಲ್ಲಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ಆಗಸ್ಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ ಭೂಮಿಪೂಜೆ ಮಾಡಿಸಲಾಗುವುದು ಎಂದು ತಿಳಿಸಿದರು.

ಡಿಎಚ್‌ಒ ಚಿದಂಬರ್, ತಹಸೀಲ್ದಾರ್ ಜಯಪ್ರಕಾಶ್, ತಾಪಂ ಇಒ ಉಮೇಶ್, ಮುಖ್ಯಾಧಿಕಾರಿ ಮಹೇಶ್‌ಕುಮಾರ್, ವೈದ್ಯಾಧಿಕಾರಿ ಡಾ.ಶ್ರೀಧರ್, ವೈದ್ಯರಾದ ಡಾ.ನಾಗೇಂದ್ರಮೂರ್ತಿ, ಡಾ.ನಾಗೇಶ್, ಡಾ.ಶಶಿಕಲಾ, ಸಿಬ್ಬಂದಿ ಸೋಮಣ್ಣ, ಆರೋಗ್ಯ ರಕ್ಷ ಸಮಿತಿ ಸಮಿತಿ ಸದಸ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net