

ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿರುವ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದ ಮುಂದುವರಿದ ಕಾಮಗಾರಿಗೆ ಶಾಸಕರ ನಿಧಿಯಿಂದ 10 ಲಕ್ಷ ರೂ. ನೀಡುವುದಾಗಿ ಎಂಎಸ್‌ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ಘೋಷಣೆ ಮಾಡಿದರು.
ನಗರದ ವರ್ತಕರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಭಾನುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯ ಪತ್ರಕರ್ತರು ನಿವೇಶನ ನೀಡುವಂತೆ ಬಹಳ ದಿನಗಳ ಬೇಡಿಕೆಯಾಗಿದೆ. ಇದನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕ್ಷೇತ್ರದಲ್ಲಿ ಬಡವರಿಗೆ ಒಂದು ಸಾವಿರಕ್ಕೆ ನಿವೇಶನ ಕೊಡಿಸುವ ಚಿಂತನೆ ಮಾಡಲಾಗಿದೆ. ಜಿಲ್ಲಾ ಕೇಂದ್ರದಲ್ಲಿ ಒಳಚರಂಡಿ ಮುಂದುವರಿದ ಕಾಮಗಾರಿಗಳಿಗೆ 42 ಕೋಟಿ ರೂ. ಹಾಗೂ ನೂತನ ಸರ್ಕಾರಿ ಬಸ್ ನಿಲ್ದಾಣಕ್ಕೆ 120 ಕೋಟಿ ರೂ. ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಚಾಮರಾಜನಗರದಲ್ಲಿ ಉತ್ತಮ ಪತ್ರಕರ್ತರಿದ್ದಾರೆ. ಸ್ವಾಭಿಮಾನದ ಪತ್ರಿಕೋದ್ಯಮದಲ್ಲಿ ತಮ್ಮದೇ ಅದ ಛಾಪು ಮೂಡಿಸಿದ್ದಾರೆ. ಚಾಮರಾಜನಗರ ಕ್ಷೇತ್ರದಲ್ಲಿ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿ, ಜಿಲ್ಲೆಯ ಅಭಿವೃದ್ಧಿಗೆ ಅವರು ಸಹ ಕಾರಣೀಭೂತರಾಗಿದ್ದಾರೆ. ನಾನು ಕ್ಷೇತ್ರದಲ್ಲಿ ನಾಲ್ಕನೇ ಬಾರಿ ಶಾಸಕನಾಗಲು ಜಿಲ್ಲೆಯ ಪತ್ರಕರ್ತರ ಸೇವೆ ಇದೆ. ಕ್ಷೇತ್ರದ ಅಭಿವೃದ್ಧಿಯಲ್ಲಿ ವಸ್ತುನಿಷ್ಠೆಯಾದ ವರದಿಗಳನ್ನು ಮಾಡುತ್ತಿದ್ದಾರೆ. ಸಮಾಜಕ್ಕೆ ಪತ್ರಕರ್ತರ ಸೇವೆ ಅತ್ಯಗತ್ಯವಾಗಿದೆ. ನಮ್ಮನ್ನು ಎಚ್ಚರಿಸುವ ಕೆಲಸವನ್ನು ಪತ್ರಕರ್ತರು ಸದಾ ಮಾಡುತ್ತಿದ್ದಾರೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಕರ್ತರು ವಿಶ್ವಾರ್ಹತೆ ಉಳಿಕೊಂಡು ಹೋಗುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದಾರೆ. ಸಾಮಾಜಿಕ ಹಾಗೂ ದ್ಯಶ್ಯ ಮಾಧ್ಯಮಗಳಕ್ಕಿಂತ ಮುದ್ರಣ ಮಾಧ್ಯಮ ಇನ್ನು ಹೆಚ್ಚಿನ ವಿಶ್ವಾಸವನ್ನು ಉಳಿಸಿಕೊಂಡು ಹೋಗುತ್ತಿದೆ. ಜನರಲ್ಲಿ ಇನ್ನು ಸಹ ಪತ್ರಿಕೆಗಳ ಬಗ್ಗೆ ಗೌರವ ಹೆಚ್ಚಾಗುತ್ತ್ತಿದೆ. ಈ ನಿಟ್ಟಿನಲ್ಲಿ ಮುದ್ರಣ ಮಾಧ್ಯಮ ಇನ್ನು ಹೆಚ್ಚು ಪ್ರಚಲಿತವಾಗಲಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಪತ್ರಕರ್ತರು ಎಂದರೆ ಸಂಶಯದಿಂದ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪತ್ರಕರ್ತರು ವಸ್ತುನಿಷ್ಠ ವರದಿ ಮಾಡಬೇಕು. ವಿಶ್ವಾಸಾರ್ಹತೆಯುಳ್ಳ ಪತ್ರಕರ್ತರು ಮುಖ್ಯವಾಹಿನಿಯಲ್ಲಿ ಇರಬೇಕು ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮ ಸ್ನೇಹಿಯಾಗಿದ್ದು, ಬಹಳಷ್ಟು ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಮೂರು ದಶಕಗಳಿಂದ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಸೌಲಭ್ಯ ಕಲ್ಪಿಸಲು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ಪತ್ರಕರ್ತರ ಯಾವುದೇ ಸಮಸ್ಯೆಗಳು ಹಾಗೂ ವಿವಿಧ ಜಿಲ್ಲೆಗಳ ಪತ್ರಕರ್ತರ ಭವನಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ ಎಂದರು.
ಮಹಾತ್ಮಾ ಗಾಂಧಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರು ಪತ್ರಕರ್ತರಾಗಿ ಸಮಾಜಕ್ಕೆ ತಮ್ಮದೇ ಸೇವೆ ಸಲ್ಲಿಸಿದ್ದಾರೆ. ಈ ಇಬ್ಬರು ಮಹಾನ್ ನಾಯಕರು ಪತ್ರಕರ್ತರಾಗಿದ್ದರು ಎಂಬುದು ನಮಗೆ ಹೆಮ್ಮೆ. ಅವರ ತತ್ವ ಅದರ್ಶಗಳನ್ನು ಮೈಗೂಡಿಸಿಕೊಂಡು ಪತ್ರಿಕೋದ್ಯಮದಲ್ಲಿ ಹೆಚ್ಚು ಸೇವೆಯನ್ನು ಸಲ್ಲಿಸಿ, ಸಮಾಜಕ್ಕೆ ನಮ್ಮದೇ ಅದ ಕೊಡುಗೆಯನ್ನು ನೀಡೋಣ ಎಂದರು. ಜಿಲ್ಲಾಧಿಕಾರಿ ಶಿಲ್ಪಾನಾಗ್ ಪ್ರಶಸ್ತಿ ಪ್ರದಾನ ಮಾಡಿ, ಜಿಲ್ಲೆಯ ಪತ್ರಕರ್ತರಿಗೆ ಈಗಾಗಲೇ ನಿವೇಶನಕ್ಕಾಗಿ ಜಾಗ ಗುರುತಿಸಲಾಗಿದ್ದು, ಕೆಲವು ಸಮಸ್ಯೆಯಿಂದಾಗಿ ವಿಳಂಬವಾಗುತ್ತಿದೆ. ಇನ್ನು 15 ದಿನಗಳೊಳಗೆ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಿ, ನಿವೇಶನ ಕೊಡಿಸುವುದಾಗಿ ಕ್ರಮ ವಹಿಸುವುದಾಗಿ ತಿಳಿಸಿದರು.
ಸನ್ಮಾನ ಸ್ವೀಕರಿಸಿದ ಶಿವಕುಮಾರ್ ಬೆಳ್ಳಿತಟ್ಟೆ ಮಾತನಾಡಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದೇವರಾಜ್ ಕಪ್ಪಸೋಗೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪತ್ರಕರ್ತರಿಗೆ ವಿವಿಧ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಸ್ಪಿ ಡಾ. ಬಿ.ಟಿ. ಕವಿತಾ ಅವರು ಪತ್ರಕರ್ತರು ಹಾಗೂ ಕುಟುಂಬದವರಿಗೆ ಬಹುಮಾನ ವಿತರಿಸಿದರು. ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸೋಮಶೇಖರ್ ಕೆರೆಗೋಡು, ವರ್ತಕರ ಸಂಘದ ಅಧ್ಯಕ್ಷ ಎಚ್.ಬಿ.ರಾಜಶೇಖರ್, ರಾಜ್ಯ ಪರಿಷತ್ ಸದಸ್ಯ ಗೂಳಿಪುರ ನಂದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಕೂರು ಪ್ರಸಾದ್, ಕೆ.ಎಸ್.ಬನಶಂಕರ ಆರಾಧ್ಯ ಇದ್ದರು.