ಬಾಲ್ಯವಿವಾಹದಿಂದ ಭವಿಷ್ಯ ಕುಂಠಿತ

19rajesh1(indushekar)
Published on

ಚಾಮರಾಜನಗರ: ಬಾಲ್ಯ ವಿವಾಹದಿಂದಾಗಿ ಹೆಣ್ಣು ಮಕ್ಕಳು ದೈಹಿಕ, ಮಾನಸಿಕ ಹಾಗೂ ಬೌದ್ಧಿಕವಾಗಿ ಶೋಷಣೆಗೆ ಒಳಗಾಗುತ್ತಿದ್ದು, ಇದರಿಂದ ಭವಿಷ್ಯ ಕುಂಠಿತಗೊಳ್ಳಲಿದೆ ಎಂದು ಜಿಲ್ಲಾ ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಕಳವಳ ವ್ಯಕ್ತಪಡಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಶುಕ್ರವಾರ ತಾಲೂಕಿನ ಅಮಚವಾಡಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಾಲ್ಯದಲ್ಲಿರುವಾಗಲೇ ಮದುವೆ ಮಾಡುವುದು ಅಪರಾಧ. ಹೆಣ್ಣು ಮಕ್ಕಳು 18 ವರ್ಷಕ್ಕಿಂತ ಹಾಗೂ 21ವರ್ಷಕ್ಕಿಂತ ಕಡಿಮೆ ವಯಸ್ಸಿನ ಗಂಡು ಮಕ್ಕಳನ್ನು ಮದುವೆ ಮಾಡುವುದು ಅಪರಾಧ. ಇದರಿಂದ ಮಕ್ಕಳ ಹಕ್ಕುಗಳಿಗೆ ಧಕ್ಕೆಯಾಗುವುದರ ಜತೆಗೆ ಆರೋಗ್ಯದ ಮೇಲೂ ದುಷ್ಪರಿಣಾಮಗಳು ಉಂಟಾಗಲಿವೆ ಎಂದರು.

ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳ ಮೇಲೆ ಲೈಂಗಿಕ ಪ್ರಕರಣಗಳು ಹೆಚ್ಚಾಗುತ್ತಿದ್ದು, ವಿದ್ಯಾರ್ಥಿಗಳು ತಮ್ಮ ಮೇಲೆ ಯಾವುದೇ ದೌರ್ಜನ್ಯವಾಗದಂತೆ ಎಚ್ಚರ ವಹಿಸಬೇಕು ಎಂದರು. ಉಪನ್ಯಾಸಕ ಸುರೇಶ್ ಋಗ್ವೇದಿ ಮಾತನಾಡಿ, ಮಕ್ಕಳ ರಕ್ಷಣೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಕಾನೂನುಗಳನ್ನು ಜಾರಿಗೆ ತಂದಿದ್ದು, ಈ ಕಾನೂನುಗಳ ಅರಿವು ಪಡೆದು ಸದುಪಯೋಗ ಹೊಂದಬೇಕು ಎಂದು ಸಲಹೆ ನೀಡಿದರು.

ಹಿರಿಯ ವಕೀಲೆ ವಿದ್ಯಾಲತಾ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಹೆಣ್ಣು- ಗಂಡು ಸಮಾನರು. ವಿದ್ಯಾರ್ಥಿ ಜೀವನವು ಭವಿಷ್ಯ ರೂಪಿಸಿಕೊಳ್ಳುವ ಮಹತ್ವದ ಸಕಾಲ. ಪ್ರೀತಿ ಪ್ರೇಮವೆಂಬ ಆಕರ್ಷಣೆಗೆ ಒಳಗಾಗದೆ, ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದೆ, ಓದಿ ಜೀವನದಲ್ಲಿ ಸಾಧನೆ ಮಾಡಬೇಕು. ತಂದೆ-ತಾಯಿ ಕಂಡ ಕನಸುಗಳನ್ನು ಸಾಕಾರಗೊಳಿಸಬೇಕೆಂದು ತಿಳಿಸಿದರು.

ಬಾಲ ನ್ಯಾಯ ಮಂಡಳಿ ಸದಸ್ಯ ಟಿ.ಜೆ.ಸುರೇಶ್ ಮಾತನಾಡಿ, ವಿದ್ಯಾರ್ಥಿಗಳು ಹದಿಹರೆಯದ ವಯಸ್ಸಿನಲ್ಲಿ ಜಾಗೃತರಾಗಿ ಹೆಜ್ಜೆ ಇಡಬೇಕು. ಕೆಟ್ಟ ಆಲೋಚನೆಯಿಂದ ದೂರವಿದ್ದು, ಒಳ್ಳೆಯದರ ಕಡೆ ಗಮನ ಕೊಟ್ಟು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಕಾಲೇಜಿನ ಪ್ರಭಾರ ಪ್ರಾಂಶುಪಾಲ ಆರ್.ಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಸಹಾಯಕ ಗ್ರಂಥಪಾಲಕ ಶಿವಕುಮಾರ್, ಉಪನ್ಯಾಸಕರಾದ ಪಿ.ಶಿವಸ್ವಾಮಿ, ಆರ್.ಬಸವಣ್ಣ, ಬಿ.ಎನ್.ರಮೇಶ್, ಸುರೇಶ್, ಯುವ ಸ್ಪಂದನ ಕೇಂದ್ರದ ಯುವ ಪರಿವರ್ತಕ ಗುರುರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net