

ಚಾಮರಾಜನಗರ; ಜಿಲ್ಲೆಯಲ್ಲಿ ಡೆಂಘೆ ಜ್ವರ ಪ್ರಕರಣಗಳನ್ನು ಪರೀಕ್ಷಿಸಲಾಗಿ 65 ಪಾಸಿಟಿವ್ ಪ್ರಕರಣಗಳನ್ನು ಗುರುತಿಸಲಾಗಿತ್ತು. ಒಂದು ಪ್ರಕರಣ ಹೊರತುಪಡಿಸಿ ಉಳಿದ ಎಲ್ಲರಿಗೂ ಅಗತ್ಯ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದರು.
ನಗರದ ಹೌಸಿಂಗ್ ಬೋರ್ಡ್‌ನ 26ನೇ ವಾರ್ಡ್‌ನಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಉದ್ಯಾನದ ಬಳಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಘಟಕದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಲಾರ್ವಾ ಸಮೀಕ್ಷೆ ಆಂದೋಲನ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಡೆಂಘೆ ನಿಯಂತ್ರಣ ಸರ್ಕಾರದ ಇಲಾಖೆಗಳ ಕೆಲಸ ಮಾತ್ರವಲ್ಲ. ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ. ಸಾಮಾನ್ಯವಾಗಿ ಹಗಲಿನಲ್ಲಿ ಕಚ್ಚುವ ಈಡೀಸ್ ಸೊಳ್ಳೆಯಿಂದ ಡೆಂಘೆ ರೋಗ ಉಲ್ಬಣವಾಗಲಿದೆ. ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಡೆಂಘೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ನಾಗರಿಕರು ಮನೆಯ ಸುತ್ತಮುತ್ತ 2-3 ದಿನಗಳ ಕಾಲ ನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸಬೇಕು. ಸಂಗ್ರಹವಾದರೂ ಅದನ್ನು ಸೂಕ್ತವಾಗಿ ವಿಲೇವಾರಿ ಮಾಡಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿ, ನಗರ ಪ್ರದೇಶಗಳಲ್ಲಿ ಡೆಂಘೆ ಕಾಯಿಲೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಪ್ರಸ್ತುತ ಮಳೆಗಾಲ ಆರಂಭವಾಗಿದ್ದು, ಬಯಲಿನಲ್ಲಿ ಅಥವಾ ಮನೆಯಲ್ಲಿ ನೀರು ಶೇಖರಣೆಯಾಗುವ ತೊಟ್ಟಿಗಳು, ಡ್ರಮ್, ಬ್ಯಾರಲ್, ಒಡೆದ ಬಾಟಲಿ, ಅನುಪಯುಕ್ತ ಟಯರ್‌ಗಳು, ಎಳೆನೀರಿನ ಚಿಪ್ಪುಗಳು, ಒಡೆದ ಬಾಟಲಿಗಳಲ್ಲಿ ನೀರು ಸಂಗ್ರಹವಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಡೆಂೆ ನಿಯಂತ್ರಣಕ್ಕೆ ಎಲ್ಲರೂ ಸಹಕರಿಸಬೇಕು. ಪ್ರತಿ ಶುಕ್ರವಾರ ಆರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಆಯಾ ಭಾಗದ ಎಲ್ಲ ಮನೆಮನೆಗಳಿಗೂ ಭೇಟಿ ನೀಡಿ ಲಾರ್ವಾ ಸಮೀಕ್ಷೆಯನ್ನು ಆಂದೋಲನದ ಮಾದರಿಯಲ್ಲಿ ಹಮ್ಮಿಕೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು.
ಇದೇ ವೇಳೆ ಹೌಸಿಂಗ್ ಬೋರ್ಡ್ ನಿವಾಸಿಯೊಬ್ಬರ ಮನೆಗೆ ತೆರಳಿ ನೀರು ಸಂಗ್ರಹಿಸಿದ್ದ ಟ್ಯಾಂಕ್ ಅನ್ನು ಪರೀಕ್ಷಿಸಿ ಲಾರ್ವಾ ಬೆಳವಣಿಗೆ ವೀಕ್ಷಿಸಲಾಯಿತು. ಅದೇ ನೀರಿಗೆ ಟೆಮಿನಾಸ್ ಲಿಕ್ವಿಡ್ ಸಿಂಪಡಿಸಿ ನೆರೆದಿದ್ದ ಸಾರ್ವಜನಿಕರಿಗೆ ಡೆಂಘೆ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು. ಅಲ್ಲದೇ ಅಲ್ಲಿನ ನಿವಾಸಿಗಳು ನೀಡಿದ ಕುಡಿಯುವ ನೀರನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ರಾಜೇಶ್‌ಕುಮಾರ್, ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿ ನಾಯಕ್, ನಗರಾಭಿವೃದ್ಧಿ ಕೋಶದ ಪ್ರಭಾರ ಯೋಜನಾ ನಿರ್ದೇಶಕ ರಾಮಚಂದ್ರ, ನಗರಸಭೆಯ ಪರಿಸರ ಇಂಜಿನಿಯರ್ ಗಿರಿಜಮ್ಮ, ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ್, ನಾರಾಯಣಸ್ವಾಮಿ, ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿ ವೆಂಕಟೇಶ್, ಹಿರಿಯ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ ದ್ವಾರಕೀಶ್, ಆರೋಗ್ಯ ಅಧಿಕಾರಿಗಳು, ಇತರರು ಇದ್ದರು.