

ಚಾಮರಾಜನಗರ: ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಕರ್ತರಿಗೆ ಕಾನೂನಿನ ಅರಿವು ಅಗತ್ಯವಾಗಿ ಬೇಕಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಬಿ.ಎಸ್.ಭಾರತಿ ಸಲಹೆ ನೀಡಿದರು.
ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಎ.ಡಿ.ಆರ್ ಕಟ್ಟಡದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಪತ್ರಕರ್ತರಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈಗಾಗಲೇ ಪತ್ರಕರ್ತರಿಗೆ ಕಾನೂನು ಅರಿವು ಇರುತ್ತದೆ. ಪ್ರತಿನಿತ್ಯ ಪತ್ರಿಕೆಗಳನ್ನು ನೋಡಿದಾಗ ಅದು ಅರ್ಥವಾಗುತ್ತದೆ. ಸುದ್ದಿಗಳನ್ನು ನೋಡಿದಾಗ ಉತ್ತಮವಾಗಿ ಬರೆದಿರುತ್ತೀರಿ. ಅದಾಗ್ಯೂ ಮತ್ತಷ್ಟು ಎಚ್ಚರಿಕೆಯಿಂದ ಪತ್ರಕರ್ತರು ಸಾಗಬೇಕು ಎಂಬ ಕಾರಣಕ್ಕೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಜಿಲ್ಲಾ ವಕೀಲರ ಸಂಘ ಮತ್ತು ಕಾನೂನು ಸೇವೆಗಳ ಪ್ರಾಧಿಕಾರ ಇದಕ್ಕೆ ಉತ್ತಮ ರೀತಿಯಲ್ಲಿ ಸಹಕಾರ ನೀಡಿದೆ. ಈ ನಿಟ್ಟಿನಲ್ಲಿ ಪತ್ರಕರ್ತರು ಇದರ ಸದುಪಯೋಗ ಪಡೆದುಕೊಂಡು, ಸಾಂವಿಧಾನಿಕ ರೀತಿಯಲ್ಲಿ ನಾವೆಲ್ಲರೂ ಒಂದಾಗಿ ಸಾಗಬೇಕಿದೆ ಎಂದರು.
ಪತ್ರಕರ್ತರಿಗೆ ಕಾನೂನಿನ ಮೇಲೆ ಗೌರವ ಇರಬೇಕು. ಸಾಕಷ್ಟು ಪತ್ರಕರ್ತರು ತಾವು ಮಾಡಿರುವ ವರದಿಗಳಿಂದಾಗಿ ಪ್ರಕರಣ ದಾಖಲಾಗಿರುತ್ತದೆ. ಇದರಿಂದಾಗಿ ಎಷ್ಟೋ ಪತ್ರಕರ್ತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಆಗಾಗಿ ಎಚ್ಚರಿಕೆಯಿಂದ ವರದಿ ಮಾಡಬೇಕಾಗುತ್ತದೆ. ನ್ಯಾಯಾಲಯಕ್ಕೆ ಸಂಬಂಧಿಸಿದ ಸುದ್ದಿ ಮಾಡುವ ಮುನ್ನಾ ವಕೀಲರ ಸಲಹೆಯನ್ನು ಪಡೆದುಕೊಳ್ಳಿ. ನಿರಂತರ ಕಲಿಕೆ ಮತ್ತು ತರಬೇತಿ ನಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂದು ತಿಳಿಸಿದರು.
ಅಪರ ಜಿಲ್ಲಾ ಸತ್ರ ನ್ಯಾಯಾಧೀಶೆ ನಿಶಾರಾಣಿ ಮಾತನಾಡಿ, ಪೋಕ್ಸೋ ಕಾಯ್ದೆಯಡಿ ನ್ಯಾಯಾಲಯದ ತೀರ್ುಗಳು ಬಂದಾಗ ಪತ್ರಕರ್ತರು ಮಕ್ಕಳ ಹೆಸರು, ಊರು ಹಾಗೂ ಇನ್ನಿತರೆ ಮಾಹಿತಿಗಳನ್ನು ನಮೂದಿಸಬಾರದು. ಮುಖ್ಯವಾಗಿ ಈ ವಿಚಾರದಲ್ಲಿ ಶಿಕ್ಷೆಯ ಪ್ರಮಾಣವನ್ನು ಹೆಚ್ಚು ಪ್ರಚಾರ ಮಾಡಬೇಕು. ಬಾಲ್ಯವಿವಾಹ ನಿಷೇಧ ಕಾಯ್ದೆಯ ಕುರಿತು ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸಬೇಕು. ಸಾಮಾನ್ಯ ಜನರನ್ನು ಜಾಗೃತಗೊಳಿಸುವಲ್ಲಿ ಪತ್ರಕರ್ತರು ಹಾಗೂ ಮಾಧ್ಯಮದ ಪಾತ್ರ ಅಪಾರವಾಗಿದೆ ಎಂದು ತಿಳಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಮಾತನಾಡಿ, ಉತ್ತಮವಾದ ಶಿಕ್ಷಣ, ಬರವಣಿಗೆ ಸಾಮರ್ಥ್ಯ, ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಶಕ್ತಿ ಇರುವವರು ಮಾತ್ರ ಪತ್ರಕರ್ತರಾಗಲು ಸಾಧ್ಯ. ಪತ್ರಕರ್ತರು ತಮ್ಮ ಪತ್ರಿಕಾ ಸ್ವಾತಂತ್ರ್ಯವನ್ನು ಯಾವುದೇ ಕಾರಣಕ್ಕೂ ದುರುಪಯೋಗಪಡಿಸಿಕೊಳ್ಳಬಾರದು. ಸ್ವಜಾತಿ ಪ್ರೇಮ ಮತ್ತು ವಿನಾಃಕಾರಣ ಆರೋಪ ಮಾಡುವುದನ್ನು ಬಿಟ್ಟು ಎಲ್ಲರೂ ಒಂದಾಗಿ ಸಾಗಬೇಕು ಎಂದರು.
ಪತ್ರಕರ್ತ ಕೆ.ನರಸಿಂಹಮೂರ್ತಿ ಉಪನ್ಯಾಸ ನೀಡಿದರು, ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಶ್ರೀಧರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹನಿರ್ದೇಶಕ ರಮೇಶ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಕೆ.ವಿರೂಪಾಕ್ಷಸ್ವಾಮಿ ಉಪಸ್ಥಿತರಿದ್ದರು.