ಕ್ರೀಡಾಕೂಟದ ಯಶಸ್ಸಿಗೆ ಪ್ರತಿಯೊಬ್ಬರು ಶ್ರಮಿಸಿ

11 HANUR 4
Published on

ಹನೂರು: ಆಯಾ ಶಾಲೆಗೆ ನೀಡಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರ ಮೂಲಕ ಪ್ರತಿಯೊಬ್ಬರೂ ತಾಲೂಕು ಮಟ್ಟದ ಕ್ರೀಡಾಕೂಟದ ಯಶಸ್ವಿಗೆ ಸಹಕರಿಸಬೇಕು ಎಂದು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಂ. ಮಹಾದೇವ ತಿಳಿಸಿದರು.

ಪಟ್ಟಣದ ಬಿಆರ್‌ಸಿ ಕೇಂದ್ರದ ಸಭಾಂಗಣದಲ್ಲಿ ಗುರುವಾರ ತಾಲೂಕು ಮಟ್ಟದ ಕ್ರೀಡಾಕೂಟ ಸಂಬಂಧ ಅಯೋಜಿಸಿದ್ಧ ಪ್ರೌಢಶಾಲೆ ಮುಖ್ಯ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಹನೂರು ಭಾಗದ ಶಾಲೆಗಳಲ್ಲಿ ಉತ್ತಮ ಕ್ರೀಡಾಪಟುಗಳಿದ್ದು, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ. ಹಾಗಾಗಿ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ. ಆಗಸ್ಟ್ 20, 22 ಹಾಗೂ 23 ಕ್ರೀಡೆ ದಿನಾಂಕ ನಿಗದಿಯಾಗಿದೆ. ಈ ಕ್ರೀಡಾಕೂಟದಲ್ಲಿ ಹನೂರಿನ ಶ್ರೀ ವಿವೇಕಾನಂದ ಪ್ರೌಢಶಾಲೆಗೆ ಕಬಡ್ಡಿ, ಥ್ರೋಬಾಲ್ ಹಾಗೂ ಕ್ರಿಸ್ತರಾಜ ಶಾಲೆಗೆ ಖೋ-ಖೋ ಮತ್ತು ಕೌದಳ್ಳಿ ಶ್ರೀ ಮಹದೇಶ್ವರ ಪ್ರೌಡಶಾಲೆಗೆ ಬಾಲ್ ಬ್ಯಾಂಡ್ಮಿಂಟನ್ ಪಂದ್ಯಾವಳಿ ಆಯೋಜಿಸಲು ಜವಾಬ್ದಾರಿ ನೀಡಲಾಗಿದೆ. ಆದ್ದರಿಂದ ಆಯಾ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಯಾವುದೇ ಲೋಪವಿಲ್ಲದಂತೆ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಿಕೊಡಬೇಕು. ಸಮಸ್ಯೆಗಳು ಉಂಟಾದರೇ ನಮ್ಮ ಗಮನಕ್ಕೆ ತರಬೇಕು ಎಂದು ಸಲಹೆ ನೀಡಿದರು.

ಹೋಬಳಿ ಮಟ್ಟದ ಕ್ರೀಡಾಕೂಟ ನಿಗಧಿ: ಇದೇ ವೇಳೆ 2024-25ನೇ ಸಾಲಿನ ಹೋಬಳಿ ಮಟ್ಟದ ಕ್ರೀಡಾಕೂಟದ ಬಗ್ಗೆ ದಿನಾಂಕವನ್ನು ನಿಗದಿಪಡಿಸಲಾಯಿತು. ಜು.23 ರಂದು ಹನೂರು, 24 ರಂದು ಲೊಕ್ಕನಹಳ್ಳಿ, 25ರಂದು ರಾಮಾಪುರ, 26ರಂದು ಮಾರ್ಟಳ್ಳಿ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಹಾಗೂ 29ರಂದು ಉನ್ನತೀಕರಿಸಿದ ಶಾಲೆಗಳ ಕ್ರೀಡಾಕೂಟವನ್ನು ಆಯೋಜಿಸಲು ನಿರ್ಧರಿಸಲಾಯಿತು. ಈ ಸಂದರ್ಭದಲ್ಲಿ ಬಿಇಒ ಮಹೇಶ್, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕೆಂಪರಾಜು, ಶಿಕ್ಷಣ ಸಂಯೋಜಕರಾದ ಕಿರಣ್‌ಕುಮಾರ್, ಚಿನ್ನಪ್ಪಯ್ಯ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net