ಗುಣಮಟ್ಟದ ಉತ್ಪಾದನೆಗೆ ಸಾವಯವ ಕೃಷಿ ಅವಶ್ಯಕ

09rajesh4
Published on

ಚಾಮರಾಜನಗರ : ರೈತರ ಆದಾಯ ದ್ವಿಗುಣಗೊಳಿಸುವುದರಲ್ಲಿ ಹಾಗೂ ಗುಣಮಟ್ಟದ ಉತ್ಪಾದನೆ ಮಾಡುವಲ್ಲಿ ರೈತರಿಗೆ ಸಾವಯವ ಕೃಷಿ ಸಹಕಾರಿಯಾಗಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಕುಲಪತಿ ಡಾ.ಎಸ್.ವಿ.ಸುರೇಶ್ ಸಲಹೆ ನೀಡಿದರು.

ತಾಲೂಕಿನ ಹರದನಹಳ್ಳಿ ಗ್ರಾಮದ ಸಮೀಪದಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಬಾರ್ಡ್ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಸಾವಯವ ಅರಿಶಿಣ ಬೇಸಾಯ ಯೋಜನೆಯಡಿ ಜಿಲ್ಲೆಯ ಆಯ್ದ ಸಾವಯವ ಅರಿಶಿಣ ಬೆಳೆಗಾರರಿಗೆ ಸಾವಯವ ಪ್ರಮಾಣ ಪತ್ರವನ್ನು ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹಸಿರು ಕ್ರಾಂತಿಯ ನಂತರ ಕೃಷಿ ಕ್ಷೇತ್ರದಲ್ಲಿ ಉಂಟಾದ ಬೆಳವಣಿಗೆಗಳು, ಗುಣಮಟ್ಟದ ಉತ್ಪಾದನೆ ಹಾಗೂ ರೈತರ ಆದಾಯ ಹೆಚ್ಚಿಸುವಲ್ಲಿ ಸಾವಯುವ ಕೃಷಿಯ ಅವಶ್ಯಕತೆ ತುಂಬ ಇದೆ. ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವಾಗ ಪರಿವರ್ತನೆ ಸಮಯದಲ್ಲಿ ಇಳುವರಿ ಮತ್ತು ಆದಾಯವನ್ನು ಸರಿದೂಗಿಸಿಕೊಳ್ಳಲು, ಈ ರೀತಿಯ ಪ್ರೋತ್ಸಾಹದಾಯಕ ಯೋಜನೆಗಳು ಸಹಕಾರಿಯಾಗುತ್ತವೆ ಎಂದರು.

ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಸುಧಾರಣೆಯಾಗಲು ಪೂರಕವಾದ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಲು ಸಾವಯವ ಕೃಷಿಗೆ ರೈತರು ಮರಳಬೇಕಿದೆ. ಇದಕ್ಕೆ ಸೂಕ್ತವಾಗಿ ಸಾವಯವ ಕೃಷಿಯು ರೈತರಿಗೆ ಸ್ಪಂದಿಸುತ್ತದೆ. ಈ ನಿಟ್ಟಿನಲ್ಲಿ ರೈತರು ಹೆಚ್ಚುಹೆಚ್ಚು ಸಾವಯುವ ಕೃಷಿಯತ್ತಾ ಮುಖಮಾಡಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಾವಯವ ಕೃಷಿ ತಂತ್ರಜ್ಞಾನ ಪರಿಕರಗಳಾದ ಬೇವಿನ ಉತ್ಪನ್ನಗಳು, ಜೈವಿಕ ಪೀಡೆನಾಶಕಗಳು, ಅಂಟುಬಲೆಗಳು, ತ್ಯಾಜ್ಯ ವಿಘಟಕ ಸೂಕ್ಷ್ಮಜೀವಿ ಸಮೂಹಗಳ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ಜಿ.ಎಸ್.ಯೋಗೇಶ್, ತೋಟಗಾರಿಕಾ ವಿಜ್ಞಾನಿ ಡಾ.ಮೋಹನ್‌ಕುಮಾರ್, ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕಿ ಜಿ.ಸುವರ್ಣ, ಶಿಕ್ಷಣ ನಿರ್ದೇಶಕ ಡಾ.ಕೆ.ಸಿ.ನಾರಾಯಣಸ್ವಾಮಿ, ಮಂಡ್ಯದ ವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಎನ್.ಶಿವಕುಮಾರ್, ಕೃಷಿ ವಿಶೇಷ ಅಧಿಕಾರಿ ಡಾ.ಸಿ.ದೊರೆಸ್ವಾಮಿ, ರೈತ ಮುಖಂಡ ಹೊನ್ನೂರು ಪ್ರಕಾಶ್, ಉಡಿಗಾಲ ರೈತ ಉತ್ಪಾದಕರ ಸಂಸ್ಥೆಯ ಶಿವರುದ್ರಪ್ಪ, ಪ್ರಗತಿಪರ ಸಾವಯವ ಕೃಷಿಕ ನಟರಾಜು ಬಂದಿಗೌಡನಹಳ್ಳಿ, ಶಶಿಕುಮಾರ್ ದೊಡ್ಡತುತ್ತೂರು, ವಿ.ಸಿ.ಹೊಸೂರಿನ ಯೋಗೇಶ್ ಹಾಗೂ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net