ಕುಂಚದಲ್ಲಿ ಅರಳಿದ ಶ್ರೀ ಚಾಮರಾಜೇಶ್ವರ ರಥ

09rajesh3
Published on

ಚಾಮರಾಜನಗರ : ಆಷಾಢಮಾಸದಲ್ಲಿ ಜರುಗುವ ಶ್ರೀ ಚಾಮರಾಜೇಶ್ವರ ಬ್ರಹ್ಮರಥೋತ್ಸವದ ಅಂಗವಾಗಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಗೆ ಮಕ್ಕಳಿಂದ ಉತ್ತಮ ಸ್ಪಂದನೆ ದೊರೆಯಿತು.

ನಗರದ ದೊಡ್ಡಂಗಡಿ ಬೀದಿಯಲ್ಲಿರುವ ವಾಸವಿ ಮಹಲ್‌ನಲ್ಲಿ ಸಂಜೀವಿನಿ ಟ್ರಸ್ಟ್ ಹಾಗೂ ಕಲಾ ಸಾಂಸ್ಕೃತಿಕ ವೇದಿಕೆಯ ವತಿಯಿಂದ ಶ್ರೀಚಾಮರಾಜೇಶ್ವರ ರಥೋತ್ಸವದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆ ಯಶಸ್ವಿಯಾಗಿ ನಡೆಯಿತು. ಸ್ಪರ್ಧೆಗೆ 200 ಮಕ್ಕಳು ಭಾಗವಹಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ 503 ವಿದ್ಯಾರ್ಥಿಗಳು ಭಾಗವಹಿಸಿ, ತಮ್ಮ ಕಲ್ಪನೆಗಳನ್ನು ಸಾಕಾರಗೊಳಿಸಿದ್ದು ಗಮನ ಸೆಳೆಯಿತು.

ಮಕ್ಕಳಿಗೆ ಶ್ರೀಚಾಮರಾಜೇಶ್ವರ ರಥದ ಚಿತ್ರಬಿಡಿಸುವ ಹಾಗೂ ಚಿತ್ರಕ್ಕೆ ಬಣ್ಣ ಹಚ್ಚಲು ಸೂಚನೆ ನೀಡಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಲು 1-10 ನೇ ತರಗತಿಯ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿತ್ತು. ಮಕ್ಕಳು ತಮ್ಮ ಕಲ್ಪನೆಯಲ್ಲಿ ಕಂಡ ಶ್ರೀಚಾಮರಾಜೇಶ್ವರ ರಥವನ್ನು ಕುಂಚದ ಮೂಲಕ ಚಿತ್ರದ ರೂಪಕ್ಕೆ ಇಳಿಸಿದ ಪರಿ ವಿಭಿನ್ನವಾಗಿತ್ತು. ಹಲವು ವಿದ್ಯಾರ್ಥಿಗಳು ಕ್ರಿಯಾಶೀಲತೆ ಹೊರ ಹೊಮ್ಮಿಸಿ ಅದ್ಭುತವಾಗಿರೇಖೆಗಳನ್ನು ಮೂಡಿಸಿ ಗಮನ ಸೆಳೆದರು.

12 ಜನರಿಗೆ ಬಹುಮಾನ: ಉತ್ತಮವಾಗಿ ಚಿತ್ರ ರಚನೆ ಮಾಡಿದ 12 ವಿದ್ಯಾರ್ಥಿಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲಾಗುವುದು. ಕಾರ್ಯಕ್ರಮ ಆಯೋಜಿಸಿ ಬಹುಮಾನ ವಿತರಣೆ ಮಾಡಲಾಗುವುದು ಎಂದು ಆಯೋಜಕ ಮತ್ತು ಸಮಾಜ ಸೇವಕ ಸುರೇಶ್‌ಗೌಡ ಮಾಹಿತಿ ನೀಡಿದರು. ಸಂಜೀವಿನಿ ಟ್ರಸ್ಟ್ ಕಾರ್ಯದರ್ಶಿ ಸತೀಶ್‌ಕುಮಾರ್, ಸಮಾಜ ಸೇವಕರಾದ ಡಾ. ಪರಮೇಶ್ವರಪ್ಪ, ಗೌರಿ ರಾಮಕೃಷ್ಣ, ಅಕ್ಷತಾ ಜೈನ್, ವಾಣಿ ಶ್ರೀನಾಥ್, ಸುಧಾ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net