

ಚಾಮರಾಜನಗರ: ರಾಜ್ಯ ಕಾಂಗ್ರೆಸ್ ಸರ್ಕಾರ ಭರವಸೆ ನೀಡಿದಂತೆ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಲಿ ಇಲ್ಲವೇ, ದಯಾಮರಣಕ್ಕೆ ಅವಕಾಶ ಮಾಡಿಕೊಡಲಿ ಎಂದು ಆಕ್ಸಿಜನ್ ದುರಂತದ ಸಂತ್ರಸ್ತೆ ನಾಗರತ್ನ ಅಳಲು ತೋಡಿಕೊಂಡರು.
ಜಿಲ್ಲೆಯಲ್ಲಿ ಆಕ್ಸಿಜನ್ ದುರಂತ ಸಂಭವಿಸಿ 4 ವರ್ಷಗಳೇ ಕಳೆದುಹೋಗಿದೆ. ಆ ವೇಳೆ ಅಧಿಕಾರದಲ್ಲಿ ಇದ್ದ ಬಿಜೆಪಿ ಸರ್ಕಾರ ಕೂಡ ಸಂತ್ರಸ್ತರಿಗೆ ಯಾವುದೇ ನೆರವು ನೀಡಲಿಲ್ಲ. ಅದೇ ವೇಳೆ ಕಾಂಗ್ರೆಸ್ ನಾಯಕರು ಅಧಿಕಾರಕ್ಕೆ ಬಂದರೆ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ಕೊಡಿಸುವ ಭರವಸೆ ನೀಡಿದ್ದರು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದರೂ ಇನ್ನೂ ಭರವಸೆ ಈಡೇರಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹಲವು ಬಾರಿ ಸರ್ಕಾರವನ್ನು ಒತ್ತಾಯಿಸಿದ ಪರಿಣಾಮವಾಗಿ ಜಿಲ್ಲಾಡಳಿತ 9 ಜನರಿಗೆ ಹೊರಗುತ್ತಿಗೆ ಆಧಾರದಲ್ಲಿ ಉದ್ಯೋಗ ನೀಡಿದೆ. ಕೆಲಸಕ್ಕೆ ಸೇರಿ 5 ತಿಂಗಳು ಕಳೆದಿದ್ದು, 2 ತಿಂಗಳ ಸಂಬಳ ನೀಡಿದ್ದು, ಇನ್ನೂ 3 ತಿಂಗಳ ಸಂಬಳ ನೀಡಬೇಕಿದೆ. ಅಲ್ಲದೆ ಉದ್ಯೋಗಕ್ಕೆ ಸೂಕ್ತ ಆದೇಶವನ್ನೂ ನೀಡಿಲ್ಲ. ಇದರಿಂದ ನಮಗೆ ಉದ್ಯೋಗ ಭದ್ರತೆ ಇಲ್ಲದಂತಾಗಿದೆ. ನಮ್ಮ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಕೆಲಸ ನೀಡಿಲ್ಲ. ವಿವಿಧ ಕಡೆ ನಮಗೆ ಕೆಲಸ ನೀಡಿದ್ದು, ಕೆಲಸ ಬಿಟ್ಟು ಸಿಮ್ಸ್ ಆಸ್ಪತ್ರೆಗೆ ಹೋಗಿ ಎಂದು ಅಧಿಕಾರಿಗಳು ಹೇಳುತ್ತಾರೆ. ಸಿಮ್ಸ್ ಆಸ್ಪತ್ರೆಗೆ ಹೋದರೆ ಅಲ್ಲಿನ ಡೀನ್ ನಿಮ್ಮ ವಿದ್ಯಾರ್ಹತೆಗೆ ತಕ್ಕಂತೆ ಕೆಲಸ ಇಲ್ಲ ಎನ್ನುತ್ತಾರೆ. ಸರ್ಕಾರದ ಆದೇಶ ಇದ್ದರೆ ತೆಗೆದುಕೊಂಡು ಬನ್ನಿ ಎಂದು ಹೇಳುತ್ತಾರೆ. ನಮ್ಮ ಪತಿಯರನ್ನು ಕಳೆದುಕೊಂಡ ಆಸ್ಪತ್ರೆಯಲ್ಲಿ ನಮಗೆ ಕೆಲಸ ಬೇಡ ಎಂದು ಹೇಳಿದರು.
ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ 24 ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ. 11 ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ಹಾಗೂ 13 ಕುಟುಂಬಗಳಿಗೆ 2 ಲಕ್ಷ ರೂ. ನೀಡಲಾಗಿದೆ. ಉಳಿದಂತೆ 12 ಕುಟುಂಬಗಳಿಗೆ ಪರಿಹಾರವನ್ನೇ ನೀಡಿಲ್ಲ. ಸೂಕ್ತ ಪರಿಹಾರ ಹಾಗೂ ಉದ್ಯೋಗ ಇಲ್ಲದೇ ಕುಟುಂಬ ನಿರ್ವಹಣೆ ಹಾಗೂ ಮಕ್ಕಳ ವಿದ್ಯಾಭ್ಯಾಸ ಮಾಡಿಸುವುದು ಕಷ್ಟಕರವಾಗಿದೆ. ಆದ್ದರಿಂದ ರಾಷ್ಟ್ರಪತಿಗಳು ಸೂಕ್ತ ಉದ್ಯೋಗ ಕಲ್ಪಿಸಿಕೊಡಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಇಲ್ಲದಿದ್ದರೆ ನಮಗೆ ದಯಾಮರಣ ಕಲ್ಪಿಸಿ ಮುಕ್ತಿಕೊಡಬೇಕು ಎಂದು ಮನವಿ ಮಾಡಿದರು. ಸಂತ್ರಸ್ತರಾದ ಸವಿತಾ, ಸೌಮ್ಯಾ, ನಂದಿನಿ, ಪುಷ್ಪಾ ಹಾಜರಿದ್ದರು.
ಕಣ್ಣೀರಿಟ್ಟ ಸಂತ್ರಸ್ತೆಯರು
ಆಕ್ಸಿಜನ್ ದುರಂತದಲ್ಲಿ ತಮ್ಮವರನ್ನು ಕಳೆದುಕೊಂಡ ದುಃಖದಲ್ಲಿ ಇಂದಿಗೂ ಸಂಕಷ್ಟ ಅನುಭವಿಸುತ್ತಿರುವ ಸಂತ್ರಸ್ತೆಯರು, ಸರ್ಕಾರ ಭರವಸೆ ನೀಡಿದಂತೆ ಉದ್ಯೋಗ ನೀಡದ ಕಾರಣಕ್ಕೆ ಕಣ್ಣೀರಿಟ್ಟು ತಮ್ಮ ದುಃಖ ತೋಡಿಕೊಂಡರು. ಸಂತ್ರಸ್ತೆ ನಾಗರತ್ನ ಅವರು ತಮಗಾದ ಸಂಕಷ್ಟಗಳನ್ನು ಬಿಚ್ಚಿಡುವಾಗ ಕಂಬನಿಗೆರೆದರು. ಅವರ ದುಃಖವನ್ನು ಕಂಡು ಜತೆಯಲ್ಲಿ ಕುಳಿತಿದ್ದ ನಾಲ್ವರು ಸಂತ್ರಸ್ತೆಯರು ಕಣ್ಣೀರು ಇಟ್ಟರು.