ಕಾಂತರಾಜು ಆಯೋಗದ ವರದಿ ಜಾರಿಗೊಳಿಸಿ

Published on

ಚಾಮರಾಜನಗರ : ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿರುವ ಕಾಂತರಾಜು ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಮುಂದಿನ ಅಧಿವೇಶನದಲ್ಲಿ ಜಾರಿಗೊಳಿಸಬೇಕು ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಮಂಗಲ ಶಿವಕುಮಾರ್ ಒತ್ತಾಯಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ 2015ರಲ್ಲಿ ಮೊದಲ ಬಾರಿಗೆ ಸಿಎಂ ಆಗಿದ್ದಾಗ ಹಿಂದುಳಿದ ವರ್ಗಗಳ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಸಮೀಕ್ಷೆ ನಡೆಸಲು ಕಾಂತರಾಜು ಆಯೋಗವನ್ನು ನೇಮಕ ಮಾಡಿದ್ದರು. ಈ ಆಯೋಗ ಕಳೆದ ಫೆಬ್ರವರಿಯಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಮುಂದಿನ ಅಧಿವೇಶನದಲ್ಲಿ ಮಂಡಿಸಿ ಜಾರಿಗೊಳಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಕಳೆದ ಚಳಿಗಾಲದ ಅಧಿವೇಶನದಲ್ಲಿಯೇ ವರದಿ ಮಂಡನೆ ಮಾಡಿ, ಜಾರಿಗೊಳಿಸುವಂತೆ ಡಿ.5 ರಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಅಲ್ಲಿಯೂ ವರದಿ ಮಂಡಿಸಿ ಜಾರಿಗೊಳಿಸಲಿಲ್ಲ. 169 ಕೋಟಿ ರೂ. ಖರ್ಚು ಮಾಡಿ ಸಮೀಕ್ಷೆ ನಡೆಸಲಾಗಿದ್ದು, ವರದಿಯನ್ನು ಜಾರಿಗೊಳಿಸುವ ಮೂಲಕ ಹಿಂದುಳಿದ ವರ್ಗಗಳ ಧ್ವನಿಯಾಗಬೇಕು. ಆ ಮೂಲಕ ಹಿಂದುಳಿದ ವರ್ಗಗಳ ಹಣೆಪಟ್ಟಿ ಹೋಗಲಾಡಿಸಬೇಕು. ಹಿಂದುಳಿದ ವರ್ಗಗಳು ಸಿದ್ದರಾಮಯ್ಯ ಅವರ ಬೆನ್ನೆಲುಬಿಗೆ ಇದ್ದು ವರದಿಯನ್ನು ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು. ಒಕ್ಕೂಟದ ಪದಾಧಿಕಾರಿಗಳಾದ ನಟರಾಜೇಗೌಡ, ರಾಮಶೆಟ್ಟಿ, ವೈ.ಕೆ.ಮೋಳೆ ನಾಗರಾಜು, ಮಹದೇವಸ್ವಾಮಿ, ಬೆಳ್ಳಶೆಟ್ಟಿ, ಸಂಪತ್‌ಕುಮಾರ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net