ಸರ್ಕಾರಿ ಶಾಲೆಗಳು ಉಳಿದರೆ ಪ್ರಗತಿ ಸಾಧ್ಯ

09rajesh1
Published on

ಚಾಮರಾಜನಗರ: ದೇಶದಲ್ಲಿ ಸರ್ಕಾರಿ ಶಾಲೆಗಳು ಉಳಿದಾಗ ಮಾತ್ರ ಎಲ್ಲ ಮಕ್ಕಳಿಗೂ ಶಿಕ್ಷಣ ದೊರೆಯುತ್ತದೆ, ಪ್ರತಿಯೊಬ್ಬರೂ ಶಿಕ್ಷಣ ಕಲಿತರೆ ದೇಶದ ಪ್ರಗತಿ ಸಾಧ್ಯವಾಗುತ್ತದೆ ಎಂದು ದೈಹಿಕ ಶಿಕ್ಷಣ ಶಿಕ್ಷಕ ನಾರಾಯಣ್ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕಿನ ಉಡಿಗಾಲ ಗ್ರಾಮದಲ್ಲಿ ಲಯನ್ ಕ್ಲಬ್ ಹಾಗೂ ಬೆಂಗಳೂರಿನ ವೈಷ್ಣವಿ ಸಂಸ್ಥೆ ವತಿಯಿಂದ ಸೋಮವಾರ ಆಯೋಜಿಸಿದ್ದ ಸರ್ಕಾರಿ ಶಾಲೆಗೆ ನೋಟ್‌ಬುಕ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಸ್ತುತ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳಿಗೆ ಸಾಕಷ್ಟು ಹಿಂದುಳಿದ ಮಕ್ಕಳು ಬರುತ್ತಾರೆ. ಸರ್ಕಾರ ನೀಡುತ್ತಿರುವ ಹಲವಾರು ಉಚಿತ ಸೌಲಭ್ಯಗಳ ನಡುವೆ ಮತ್ತಷ್ಟು ಮೂಸೌಕರ್ಯಗಳನ್ನು ಮಕ್ಕಳಿಗೆ ಕಲ್ಪಿಸಿದಾಗ ಸರ್ಕಾರಿ ಶಾಲೆಯ ಮಕ್ಕಳು ನಾವು ಯಾರಿಗೂ ಕಡಿಮೆ ಇಲ್ಲ ಎನ್ನುವ ನಿಟ್ಟಿನಲ್ಲಿ ವಿಧ್ಯಾಭ್ಯಾಸ ಮಾಡುತ್ತಾರೆ. ಈ ನಿಟ್ಟಿನಲ್ಲಿ ಹಲವು ದಾನಿಗಳಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನೋಟ್‌ಬುಕ್ ಹಾಗೂ ಇನ್ನಿತರ ಸಹಕಾರವನ್ನು ಮಾಡಲಾಗುತ್ತಿದೆ ಎಂದರು.

ಲಯನ್ ಕ್ಲಬ್ ಮತ್ತು ಬೆಂಗಳೂರು ವೈಷ್ಣವಿ ಸಂಸ್ಥೆ ವತಿಯಿಂದ ಉಡಿಗಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 50 ಸಾವಿರ ರೂ. ವೆಚ್ಚದಲ್ಲಿ ಬಣ್ಣ ಹೊಡೆಸಲಾಗಿದೆ. ಅದಲ್ಲದೇ 50 ಸಾವಿರ ರೂ. ಬೆಲೆ ಬಾಳುವ ನೋಟ್‌ಬುಕ್ ಮತ್ತು ಲೇಖನ ಸಾಮಗ್ರಿಗಳನ್ನು ವಿತರಣೆ ಮಾಡಲಾಗಿದೆ. ಬೆಂಗಳೂರಿನ ಭಾರತೀಯ ರಿಸರ್ವ್ ಬ್ಯಾಂಕ್ ಸಹಕಾರದಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಶಾಲೆಗೆ 10 ಕಂಪ್ಯೂಟರ್‌ಗಳನ್ನು ನೀಡಿರುತ್ತಾರೆ ಎಂದು ಮಾಹಿತಿ ನೀಡಿದರು.

ಹೊಂಗನೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಯಡಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ 1 ವರ್ಷಕ್ಕೆ ಆಗುವಂತೆ ನೋಟ್‌ಬುಕ್ ಮತ್ತು ಲೇಖನ ಸಾಮಗ್ರಿಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಿಆರ್‌ಪಿ ಸಂಪತ್‌ಕುಮಾರ್, ಶಾಲಾ ಅಭಿವೃದ್ಧಿ ಸಮಿತಿ ದೇವಣ್ಣ, ಸದಸ್ಯರಾದ ಮಹದೇವಸ್ವಾಮಿ, ಪ್ರಕಾಶ್, ಶಿವಕುಮಾರ್, ಬಸವರಾಜ ನಾಯಕ್, ಶೀಲಾ, ಸುನೀತಾ, ಸೌಮ್ಯಾ, ಮಂಜುಳಾ, ಭಾಗ್ಯಾ, ಮುಖ್ಯ ಶಿಕ್ಷಕ ಎಂ.ಡಿ.ಮಹದೇವಯ್ಯ, ಸಹಶಿಕ್ಷಕರಾದ ಪ್ರಸಾದ್, ಚನ್ನಬಸವಣ್ಣ, ರೂಪಾ, ವಿಜಯಲಕ್ಷ್ಮೀ, ಪದ್ಮಾವತಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net