

ಚಾಮರಾಜನಗರ: ಜಿಲ್ಲೆಯ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಆರೋಗ್ಯ ದೊರಕಿಸುವ ಸಿಮ್ಸ್ ಆಸ್ಪತ್ರೆಯಲ್ಲಿ ಹಲವಾರು ಸಮಸ್ಯೆಗಳು ತಾಂಡವವಾಡುತ್ತಿದ್ದು, ರೋಗಿಗಳು ಹಾಗೂ ಸಾರ್ವಜನಿಕರು ನಿತ್ಯವೂ ಸಂಕಷ್ಟ ಅನುಭವಿಸುವಂತಾಗಿದೆ.
ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಬೋಧನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬರುವ ಜನರಿಗೆ ಸಕಾಲದಲ್ಲಿ ಹೊರ ರೋಗಿ ಚೀಟಿ ದೊರೆಯುವುದಿಲ್ಲ. ರೋಗಿಗಳಿಗೆ ಸೂಕ್ತ ಸಮಯಕ್ಕೆ ವೈದ್ಯರು ದೊರಕುವುದಿಲ್ಲ, ಅಲ್ಲದೆ ಒಳರೋಗಿಗಳಿಗೆ ಸಕಾಲದಲ್ಲಿ ಉತ್ತಮವಾದ ಚಿಕಿತ್ಸೆ ನೀಡುವುದಿಲ್ಲ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಆಸ್ಪತ್ರೆಯ ಒಳಭಾಗದಲ್ಲಿ ಶುದ್ಧವಾದ ಕುಡಿಯುವ ನೀರು ಪೂರೈಕೆ ಮಾಡುವುದಿಲ್ಲ, ಆಸ್ಪತ್ರೆಯಲ್ಲಿರುವ ಶೌಚಗೃಹಗಳಲ್ಲಿ ಸ್ವಚ್ಛತೆ ನಿರ್ವಹಣೆ ಮಾಡಿಲ್ಲ. ಕೆಲವು ಶೌಚಗೃಹಗಳಿಗೆ ಬೀಗ ಹಾಕಲಾಗಿರುತ್ತದೆ. ಇದರಿಂದ ರೋಗಿಗಳು ಹಾಗೂ ಸಾರ್ವಜನಿಕರು ನಿತ್ಯವೂ ಪರದಾಡುವ ಪರಿಸ್ಥಿತಿ ಇದೆ. ಅಂಗವಿಕಲರು ಹಾಗೂ ಹಿರಿಯ ನಾಗರಿಕರು ಚೀಟಿ ತೆಗೆದುಕೊಳ್ಳಲು ಸರದಿಯಲ್ಲಿ ನಿಲ್ಲುವಂತಹ ಪರಿಸ್ಥಿತಿ ಇದ್ದು, ಕಾಟಾಚಾರಕ್ಕೆ ಮಾತ್ರ ಅವರಿಗೆ ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ. ರೋಗಿಗಳಿಗೆ ಔಷಧ, ಬ್ಯಾಂಡೇಜ್ ಹಾಗೂ ಇನ್ನಿತರ ವಸ್ತುಗಳನ್ನು ಹೊರಗಡೆ ತರುವಂತೆ ಸೂಚಿಸಲಾಗುತ್ತಿದ್ದು, ಪರಿಣಾಮವಾಗಿ ಬಡರೋಗಿಗಳು ನಿಜಕ್ಕೂ ತೊಂದರೆ ಅನುಭವಿಸುವಂತಾಗಿದೆ.
ಅಲ್ಲದೇ, ಸಿಮ್ಸ್ ಆಸ್ಪತ್ರೆಗೆ ಹೋಗುವ ರಸ್ತೆಯಲ್ಲಿ ಸೂಕ್ತ ರೀತಿಯಲ್ಲಿ ಬೀದಿ ದೀಪಗಳನ್ನು ಅಳವಡಿಸದೇ ಇರುವುದರಿಂದ ರಾತ್ರಿ ವೇಳೆಯಲ್ಲಿ ಆಸ್ಪತ್ರೆಗೆ ಹೋಗುವವರಿಗೆ ಸಮಸ್ಯೆಯಾಗುತ್ತಿದೆ. ಸಂಜೆ ವೇಳೆ ಸಾರಿಗೆ ಬಸ್ ಸೌಲಭ್ಯ ಇಲ್ಲದೆ, ಸಾರ್ವಜನಿಕರು ಆಟೋಗಳಲ್ಲಿ ಹೆಚ್ಚು ಹಣ ಕೊಟ್ಟು ಸಂಚರಿಸುವ ಪರಿಸ್ಥಿತಿ ಇದೆ. ಈ ನಿಟ್ಟಿನಲ್ಲಿ ಸಿಮ್ಸ್ ಆಡಳಿತ ಮಂಡಳಿ ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಸಿಮ್ಸ್ ಆಸ್ಪತ್ರೆಯ ಮೂಲಸೌಕರ್ಯ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸಾಲುಗಟ್ಟಿ ನಿಲ್ಲುವ ಜನ
ಸಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬರುವ ರೋಗಿಗಳು ಹಾಗೂ ಸಾರ್ವಜನಿಕರು ನಿತ್ಯವೂ ಪರದಾಡುವಂತಹ ಪರಿಸ್ಥಿತಿ ಇದೆ. ರಕ್ತ ಪರೀಕ್ಷೆ, ಎಕ್ಸ್‌ರೇ ಹಾಗೂ ಇನ್ನಿತರ ಕೊಠಡಿಗಳಲ್ಲಿ ನಿತ್ಯವೂ ಸಾವಿರಾರು ಜನರು ಸಾಲುಗಟ್ಟಿ ನಿಂತಿರುತ್ತಾರೆ. ಸೂಕ್ತ ಸಮಯಕ್ಕೆ ವೈದ್ಯರಾಗಲಿ, ಸಿಬ್ಬಂದಿಯಾಗಲಿ ಸ್ಪಂದಿಸುವುದಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ನಿತ್ಯವೂ ಕೇಳಿಬರುತ್ತಿದೆ. ಹಲವು ದಿನಗಳಿಂದ ಬ್ಯಾಂಡೇಜ್ ದೊರಕದೆ ನೂರಾರು ಬಡಜನರು ಹೊರಗಡೆಯಿಂದ ನೂರಾರು ರೂ. ವೆಚ್ಚ ಮಾಡಿಕೊಂಡು ಬ್ಯಾಂಡೇಜ್ ಬಟ್ಟೆಗಳನ್ನು ತಂದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆಸ್ಪತ್ರೆಯಲ್ಲಿ ಉಚಿತವಾಗಿ ದೊರೆಯುವ ಔಷಧಗಳು ಸೂಕ್ತ ರೀತಿಯಲ್ಲಿ ದೊರೆಯುವುದಿಲ್ಲ. ರೋಗಿಗಳಿಗೆ ಔಷಧಗಳನ್ನು ಖರೀದಿಸಲು ವೈದ್ಯರು ಹೆಚ್ಚಾಗಿ ಹೊರಗಡೆಗೆ ಚೀಟಿ ಬರೆಯುತ್ತಿದ್ದಾರೆ. ಒಟ್ಟಾರೆಯಾಗಿ ಸಿಮ್ಸ್ ಆಸ್ಪತ್ರೆಯಲ್ಲಿ ನಿತ್ಯವೂ ಸಾರ್ವಜನಿಕರು ಕಾಯಿಲೆಯ ಜತೆಗೆ ಮತ್ತಷ್ಟು ನೋವುಗಳನ್ನು ಅನುಭವಿಸುವಂತಾಗಿದೆ ಎಂದು ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ರಮೇಶ್ ವಿಜಯವಾಣಿ ಜತೆಗೆ ಅಳಲು ತೋಡಿಕೊಂಡರು.
ಮಕ್ಕಳ ಆಸ್ಪತ್ರೆಯಲ್ಲೂ ಇದೇ ಸಮಸ್ಯೆ:
ಜಿಲ್ಲಾ ಕೇಂದ್ರದಲ್ಲೇ ಇರುವ ತಾಯಿ-ಮಕ್ಕಳ ಆಸ್ಪತ್ರೆಯಲ್ಲೂ ವೈದ್ಯರು ಸೂಕ್ತ ಸಮಯಕ್ಕೆ ಬರುವುದಿಲ್ಲ, ಮಕ್ಕಳಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಆಸ್ಪತ್ರೆಯಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿದೆ. ಶೌಚಗೃಹಗಳು ಗಬ್ಬುನಾರುತ್ತಿದ್ದು, ಸೂಕ್ತ ನಿರ್ವಹಣೆ ಇಲ್ಲದೆ ಅಶುಚಿತ್ವದಿಂದ ಕೂಡಿದೆ. ಶೌಚಗೃಹಗಳಿಗೆ ಬಾಗಿಲುಗಳೇ ಇಲ್ಲದಿರುವುದು, ಆಸ್ಪತ್ರೆಯಲ್ಲಿರುವ ಲಿಫ್ಟ್ ಆಗಾಗ್ಗೆ ಕೆಟ್ಟು ನಿಲ್ಲುವುದು ಆಸ್ಪತ್ರೆಯ ಅವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.
ಹೊರಗುತ್ತಿಗೆ ನೌಕರರ ಸಮಸ್ಯೆ
ಸಿಮ್ಸ್ ಆಸ್ಪತ್ರೆ ಪ್ರಾರಂಭವಾದ ದಿನಗಳಿಂದಲೂ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ಹೊರಗುತ್ತಿಗೆ ನೌಕರರ ಸಮಸ್ಯೆ ಮುಂದುವರಿಯುತ್ತಲೇ ಇದೆ. ಹಲವಾರು ಹೊರಗುತ್ತಿಗೆ ನೌಕರರು ನಮ್ಮನ್ನು ಏಕಾಏಕಿ ಕೆಲಸದಿಂದ ತೆಗೆಯಲಾಗಿತ್ತು ಎಂದು ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು. ಹೊರಗುತ್ತಿಗೆ ನೌಕರರ ಮೇಲೆ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ ಎಂದು ಸುಮಾರು 20ಕ್ಕಿಂತಲೂ ಹೆಚ್ಚು ನೌಕರರನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕೆಲವು ನೌಕರರ ಮೇಲೆ ಪ್ರಕರಣ ಇದ್ದರೂ ಕೆಲಸ ಮಾಡುತ್ತಿದ್ದಾರೆ. ಆದರೆ ಕೆಲವರನ್ನು ಯಾವುದೇ ಕಾರಣವಿಲ್ಲದೆ ತೆಗೆದುಹಾಕಲಾಗಿದೆ ಎಂದು ಹೊರಗುತ್ತಿಗೆ ನೌಕರ ಆದರ್ಶಕುಮಾರ್ ವಿಜಯವಾಣಿಗೆ ತಿಳಿಸಿದರು.
ಸಿಮ್ಸ್ ಕಾಲೇಜಿಗೆ ದಂಡ:
ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದ ಸಿಮ್ಸ್ ಆಸ್ಪತ್ರೆಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ *ದಂಡ ವಿಧಿಸಿದೆ. ವೈದ್ಯಕೀಯ ಕಾಲೇಜಿಗೆ ಅಗತ್ಯ ಸಂಖ್ಯೆಯಲ್ಲಿ ಅಧ್ಯಾಪಕರನ್ನು ನೇಮಕ ಮಾಡಿಕೊಳ್ಳದೆ ಇರುವುದು, ಪ್ರಯೋಗಾಲಯಗಳ ಕೊರತೆ, ಕಳಪೆ ಉಪಕರಣಗಳು, ರೋಗಿಗಳ ದತ್ತಾಂಶ ಸರಿಯಾಗಿ ನಿರ್ವಹಿಸದೇ ಇರುವುದು ಹಾಗೂ ತನಿಖೆಯ ಸಮಯದಲ್ಲಿ ಸೂಕ್ತ ಮಾಹಿತಿಯನ್ನು ಒದಗಿಸದೇ ಇರುವ ಮಾನದಂಡಗಳನ್ನು ಇಟ್ಟುಕೊಂಡು ಆಯೋಗ ದಂಡ ವಿಧಿಸುತ್ತದೆ. ಸಿಮ್ಸ್ ಆಸ್ಪತ್ರೆಯಲ್ಲಿ ದತ್ತಾಂಶಗಳನ್ನು ಸೂಕ್ತ ರೀತಿಯಲ್ಲಿ ಕ್ರೋಡೀಕರಿಸಿಲ್ಲ ಎಂಬ ಕಾರಣಕ್ಕೆ *ದಂಡ ವಿಧಿಸಲಾಗಿದೆ.
ಸಿಮ್ಸ್ ಆಸ್ಪತ್ರೆಯಲ್ಲಿ ನಿತ್ಯವೂ ರೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರವೇ ಉಚಿತವಾಗಿ ಔಷಧ ನೀಡಿದರೂ, ವಿವಿಧ ಬಗೆಯ ಔಷಧ ಮತ್ತು ಬ್ಯಾಂಡೇಜ್ ಬಟ್ಟೆ ಖರೀದಿಸಲು ಹೊರಗಡೆಗೆ ಚೀಟಿ ಬರೆಯುತ್ತಿದ್ದಾರೆ. ಅಂಗವಿಕಲರಿಗೆ ಹಾಗೂ ಹಿರಿಯ ನಾಗರಿಕರು ಮೂಲಸೌಕರ್ಯ ಸಮಸ್ಯೆಯಿಂದ ಹೆಚ್ಚು ಸಮಸ್ಯೆ ಅನುಭವಿಸುತ್ತಿದ್ದಾರೆ.ರಮೇಶ್, ಸಿದ್ದಯ್ಯನಪುರ, ಚಾಮರಾಜನಗರ ಕಾಲೇಜಿನಲ್ಲಿ ಮೆಡಿಸನ್ ಮತ್ತು ಪೀಡಿಯಾಟ್ರಿಕ್ ವಿಭಾಗದ ಅನುಮತಿಗಾಗಿ ಕೋರಿದ್ದೆವು. ಮೆಡಿಸನ್ ವಿಭಾಗಕ್ಕೆ ಅನುಮತಿ ದೊರಕಿದೆ. ದಾಖಲಾತಿ ಹಾಗೂ ಬಯೋಮೆಟ್ರಿಕ್ ನಿರ್ವಹಣೆ ಇಲ್ಲದಿರುವುದಕ್ಕೆ ಕಾಲೇಜಿಗೆ*ದಂಡ ವಿಧಿಸಲಾಗಿದೆ. ಆಸ್ಪತ್ರೆಯ ಮೂಲಸೌಕರ್ಯ ಕೊರತೆ ಸಂಬಂಧ ಯಾವುದೇ ಸಮಸ್ಯೆಗಳೂ ಇಲ್ಲ.ಡಾ.ಮಂಜುನಾಥ್,ಡೀನ್ ಮತ್ತು ನಿರ್ದೇಶಕ, ಸಿಮ್ಸ್ ಆಸ್ಪತ್ರೆ, ಚಾಮರಾಜನಗರ ಆಸ್ಪತ್ರೆಯಲ್ಲಿ ಉಚಿತವಾಗಿ ಔಷಧ ಮತ್ತು ಬ್ಯಾಂಡೇಜ್ ಸೂಕ್ತ ರೀತಿಯಲ್ಲಿ ಪೂರೈಕೆ ಮಾಡಲಾಗುತ್ತಿದೆ. ಅದಾಗ್ಯೂ ಹೊರಗಡೆಗೆ ಚೀಟಿ ಬರೆದರೆ ನಮ್ಮ ಗಮನಕ್ಕೆ ತಂದರೆ ಅವರ ಮೇಲೆ ಕ್ರಮವಹಿಸುತ್ತೇವೆ. ಆಸ್ಪತ್ರೆಯಲ್ಲಿ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.ಡಾ.ಮಹೇಶ್,ವೈದ್ಯಾಧಿಕಾರಿ, ಸಿಮ್ಸ್ ಆಸ್ಪತ್ರೆ, ಚಾಮರಾಜನಗರ