

ಚಾಮರಾಜನಗರ: ಆಮ್ಲಜನಕ ದುರಂತದ ಸಂತ್ರಸ್ತರ ಕುರಿತು ಬೇರೆ ಶಾಸಕರು ಬಾಯಿಗೆ ಬೀಗ ಹಾಕಿಕೊಂಡು ಕುಳಿತಿರುವಾಗ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಇದೇ ವಿಚಾರವಾಗಿ ಧ್ವನಿ ಎತ್ತಿ ಸಂತ್ರಸ್ತರ ಪರ ಕಾಳಜಿ ತೋರಿದರು.
ಸಭೆಗೆ ಸಿಎಂ ಸಿದ್ದರಾಮಯ್ಯ ಆಗಮಿಸುವ ಮುನ್ನ ಮಾತನಾಡಿದ ಅವರು, ಸಂತ್ರಸ್ತರಿಗೆ ಉದ್ಯೋಗ ನೀಡಬೇಕೆಂದು ನಾನು ಬೆಳಗಾವಿ ಅಧಿವೇಶದಲ್ಲೂ ಮಾತನಾಡಿದ್ದೆ. ಪ್ರಸ್ತುತ ಸಂತ್ರಸ್ತರೆಲ್ಲರಿಗೂ ಒಂದೇ ಕಡೆ ಕೆಲಸ ಕೊಡಲು ಸಾಧ್ಯವಾಗಿಲ್ಲ. ಎಲ್ಲೆಲ್ಲಿ ಕೆಲಸ ಕೊಡಲು ಸಾಧ್ಯವಿದೆಯೋ ಅಲ್ಲಿ ಕೆಲಸ ಕೊಟ್ಟಿದ್ದೇವೆ. ಇದನ್ನು ಸಂತ್ರಸ್ತ ಮಹಿಳೆಯರು ಗಂಭೀರವಾಗಿ ಪರಿಗಣಿಸಬೇಕು ಎಂದರು. ಲೋಕಸಭೆ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ನಿಮ್ಮ ಕ್ಷೇತ್ರದಿಂದ ಎಷ್ಟು ಲೀಡ್ ಕೊಡಿಸುತ್ತೀರಾ ಎಂದು ನನ್ನ ಕೇಳಿದ್ದರು. ಅವರಿಗೆ ನಾನು 30 ಸಾವಿರ ಲೀಡ್ ಎಂದಿದ್ದೆ. ಕ್ಷೇತ್ರದ ಜನತೆ ನನ್ನ ನಿರೀಕ್ಷೆಯನ್ನು ನಿಜ ಮಾಡಿದ್ದಾರೆಂದು ಸಂತಸ ವ್ಯಕ್ತಪಡಿಸಿದರು.
ಒಕ್ಕಲೆಬ್ಬಿಸುವ ಹುನ್ನಾರ ಬೇಡ: ಅರಣ್ಯ ಕಾನೂನು, ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಹೆಸರಿನಲ್ಲಿ ಕಾಡು ಜನರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡಬಾರದು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಒತ್ತಾಯಿಸಿದರು.
ಬೆಂಗಳೂರು ಅಥವಾ ಹೊರಗಡೆಯಿಂದ ಬಂದು ರೆಸಾರ್ಟ್ ಕಟ್ಟಿಕೊಳ್ಳುವವರಿಗೆ ಯಾವುದೇ ರೀತಿಯ ಕಾನೂನು ಇಲ್ಲ. ಆದರೆ ಇಲ್ಲಿನ ಮೂಲ ನಿವಾಸಿಗಳನ್ನು ಮಾತ್ರ ಒಕ್ಕಲೆಬ್ಬಿಸುವುದು ಎಷ್ಟು ಸರಿ. ಅರಣ್ಯ ಸಚಿವರು, ಕಂದಾಯ ಸಚಿವರು, ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ಗಂಭೀರವಾಗಿ ಚರ್ಚೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಜಿಲ್ಲೆಯ ಕುರಿತು ಪ್ರಗತಿ ಪರಿಶೀಲನೆ ಮಾಡಿದಾಗ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗಿರಿಜನರ ಹಾಡಿಗಳು ಅಭಿವೃದ್ಧಿಯಾಗಬೇಕು. ಕುಡಿಯುವ ನೀರು, ಶಾಲೆ, ರಸ್ತೆಗೆ ಸೌಲಭ್ಯ ಒದಗಿಸಬೇಕು ಎಂದು ಸೂಚನೆ ನೀಡಿದ್ದಾರೆ ಎಂದು ಹೇಳಿದರು.