ಎಲ್ಲ ವರ್ಗಕ್ಕೂ ನ್ಯಾಯ, ಇದೇ ನಮ್ಮ ಧ್ಯೇಯ

10rajesh3
Published on

ಚಾಮರಾಜನಗರ: ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ವರ್ಗಕ್ಕೂ ನ್ಯಾಯ ಕೊಡಬೇಕೆಂಬುದು ನಮ್ಮ ಉದ್ದೇಶ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬುಧವಾರ ಆಯೋಜಿಸಿದ್ದ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕೃತಜ್ಞತಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ನಿಮ್ಮೆಲ್ಲರ ಶ್ರಮ, ಹೋರಾಟ ಮತದಾರರ ಮನವೊಲಿಸಿದೆ. ಸುನೀಲ್‌ಬೋಸ್‌ಗೆ ದೊಡ್ಡ ಅಂತರದ ಗೆಲುವು ಸಿಕ್ಕಿದೆ. ನಾನು ಸುಮಾರು 40 ವರ್ಷಗಳಿಂದ ಕ್ಷೇತ್ರದ ಜನತೆಯೊಂದಿಗೆ ಒಡನಾಟ ಹೊಂದಿದ್ದೇನೆ. ಎಲ್ಲ ಚುನಾವಣೆಗಳಲ್ಲೂ ನನಗೆ ಮತ್ತು ನಮ್ಮ ಪಕ್ಷಕ್ಕೆ ಆಶೀರ್ವಾದ ಮಾಡುತ್ತಿದ್ದೀರಿ.

ನಿಮ್ಮ ಋಣವನ್ನು ತೀರಿಸುವ ಕೆಲಸವನ್ನು ಅಭಿವೃದ್ಧಿ ಕಾರ್ಯಗಳಿಂದಲೇ ತೀರಿಸಬೇಕು. ನಾವು ಎಲ್ಲ ರಂಗದಲ್ಲೂ ಅಭಿವೃದ್ಧಿ ಮಾಡಿದ್ದೇವೆ ಎಂದು ಹೇಳಲ್ಲ. ಕೆಲವು ಅಭಿವೃದ್ಧಿಗಳನ್ನಾದರೂ ಮಾಡಿದ್ದೇವೆ ಎಂದು ಹೆಮ್ಮೆಯಿಂದ ಹೇಳುತ್ತೇನೆ ಎಂದರು. ಬಡವರ ಪರ ಕಾರ್ಯಕ್ರಮ: ನಾನು ಬಡವರ ಪರವಾದ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದೇನೆ. ಇವುಗಳ ಜತೆಗೆ 5 ಗ್ಯಾರಂಟಿಗಳನ್ನೂ ಕೊಟ್ಟಿದ್ದೇನೆ. 56 ಸಾವಿರ ಕೋಟಿ ರೂ.ಗಳನ್ನು ಈ ಯೋಜನೆಗೆ ನೀಡಿದ್ದೇವೆ. ಬಿಜೆಪಿಯವರು ಗ್ಯಾರಂಟಿಗಳನ್ನು ಜಾರಿ ಮಾಡಲು ಆಗಲ್ಲ ಎನ್ನುತ್ತಿದ್ದರು. ಜಾರಿಯಾದ ಮೇಲೆ ರಾಜ್ಯ ಸರ್ಕಾರದಲ್ಲಿ ದುಡ್ಡಿಲ್ಲ ಎನ್ನುತ್ತಿದ್ದಾರೆ. ಬಜೆಟ್‌ನಲ್ಲಿ ೋಷಣೆ ಮಾಡಿದ ಯಾವುದೇ ಯೋಜನೆಗೂ ಹಣದ ಕೊರತೆ ಇಲ್ಲ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ ಎಂದು ಹೇಳಿದರು.

ಬಿಜೆಪಿಯವರು ಚಾಮರಾಜನಗರ ಜಿಲ್ಲೆಗೆ ಏನು ಕೊಡುಗೆ ಕೊಟ್ಟಿದ್ದಾರೆ ಹೇಳಲಿ?. ಸುಳ್ಳನ್ನೇ ನೂರು ಸಾರಿ ಹೇಳಿ ಸತ್ಯ ಮಾಡಲು ಪ್ರಯತ್ನ ಮಾಡುವುದೇ ಬಿಜೆಪಿಯವರ ಕಸುಬು. ವಿರೋಧ ಪಕ್ಷದವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಕ್ರಿಯವಾಗಿರಬೇಕು. ಅಂಕಿ-ಅಂಶಗಳ ಮೇಲೆ ಸರ್ಕಾರ ಮಾಡುವ ಲೋಪಗಳನ್ನು ಹೇಳಬೇಕು. ಇದನ್ನು ಬಿಟ್ಟು ಸುಳ್ಳು ಆರೋಪ ಮಾಡಬಾರದು. ನಾವು ಎಷ್ಟೇ ಸುಳ್ಳು ಹೇಳಿದರೂ ಬಿಜೆಪಿ ತಿಳಿದಿರುವ ರೀತಿ ಮತದಾರರು ದಡ್ಡರಲ್ಲ, ದಾರಿ ತಪ್ಪಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಸರ್ವಾಂಗೀಣ ಪ್ರಗತಿಗೆ ಯತ್ನಿಸೋಣ:
ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್.ಸಿ.ಮಹದೇವಪ್ಪ ಮಾತನಾಡಿ, ಸುನೀಲ್‌ಬೋಸ್ ಸಂಸದರಾಗಿ ಆಯ್ಕೆಯಾದ ಮೇಲೆ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಸಂಪರ್ಕ ಮಾಡಿದ್ದಾರೆ. ಸಭೆಯ ಮೂಲಕ ಕ್ಷೇತ್ರದ ಜನರ ಕಷ್ಟ ಕಾರ್ಪಣ್ಯಗಳ ನಿವಾರಣೆ, ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ನಾವೆಲ್ಲರೂ ಸೇರಿ ಪ್ರಯತ್ನ ಮಾಡುತ್ತೇವೆ ಎಂದರು.
ಸುನೀಲ್‌ಬೋಸ್ ಈಗ ಕೇಂದ್ರದ ಎಲ್ಲ ಸಚಿವರನ್ನೂ ಭೇಟಿ ಮಾಡುತ್ತಿದ್ದಾರೆ. ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಅವರನ್ನು ಭೇಟಿ ಮಾಡಿ ಸತ್ಯಮಂಗಲ ರೈಲು ಮಾರ್ಗದ ಯೋಜನೆ ಕುರಿತು ಮಾತನಾಡಿದ್ದಾರೆ. ನಾವು ಕ್ಷೇತ್ರಕ್ಕೆ ಒಂದು ತಿಂಗಳ ಅವಧಿಯಲ್ಲಿ 300 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದೇವೆ. ಇಲ್ಲಿ ರೇಷ್ಮೆಗೆ ಮರುಜೀವ, ಉದ್ಯೋಗ ಅವಕಾಶಗಳನ್ನು ಕಲ್ಪಿಸಲು ಮುಖ್ಯಮಂತ್ರಿ ಗಮನಕ್ಕೆ ತಂದಿದ್ದೇವೆ ಎಂದರು.

ಶಾಸಕ ಅನಿಲ್ ಚಿಕ್ಕಮಾದು, ವಿಧಾನ ಪರಿಷತ್ತಿನ ಸದಸ್ಯರಾದ ಯತೀಂದ್ರ ಸಿದ್ದರಾಮಯ್ಯ, ಡಾ.ಡಿ.ತಿಮ್ಮಯ್ಯ, ಶಾಸಕ ಮತ್ತು ಎಂಎಸ್‌ಐಎಲ್ ಅಧ್ಯಕ್ಷ ಸಿ.ಪುಟ್ಟರಂಗಶೆಟ್ಟಿ, ಶಾಸಕರಾದ ಎಚ್.ಎಂ. ಗಣೇಶ್‌ಪ್ರಸಾದ್, ಮುಡಾ ಅಧ್ಯಕ್ಷ ಮರಿಗೌಡ, ಚಾಮರಾಜನಗರ ಕಾಂಗ್ರೆಸ್ ಮತ್ತು ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಮೈಸೂರು ಜಿಲ್ಲಾಧ್ಯಕ್ಷ ವಿಜಯ್‌ಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಪುಷ್ಪಾ ಅಮರ್‌ನಾಥ್, ಮಾಜಿ ಶಾಸಕರಾದ ಆರ್.ನರೇಂದ್ರ, ಭಾರತಿ ಶಂಕರ್, ಜಿ.ಎನ್.ನಂಜುಂಡಸ್ವಾಮಿ, ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಜಯಣ್ಣ, ಮಾಜಿ ಸಂಸದರಾದ ಕಾಗಲವಾಡಿ ಶಿವಣ್ಣ, ಸಿದ್ದರಾಜು, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನ, ಮಾಜಿ ಸಚಿವರಾದ ಕೋಟೆ ಶಿವಣ್ಣ, ಸೋಮಶೇಖರ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net