ಮಹಿಳೆಯರಿಗೆ ಕಾನೂನು ಅರಿವು ಅಗತ್ಯ

10rajesh2
Published on

ಚಾಮರಾಜನಗರ : ಮಹಿಳೆಯರು ಕಾನೂನಿನ ಅರಿವು ತಿಳಿದುಕೊಳ್ಳುವ ಮೂಲಕ ಅನ್ಯಾಯದ ವಿರುದ್ಧ ಹೋರಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಬಾಲನ್ಯಾಯ ಮಂಡಳಿ ಸದಸ್ಯ ಟಿ.ಜೆ.ಸುರೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ಗುಂಡ್ಲುಪೇಟೆ ತಾಲೂಕಿನ ಕರಕಲ ಮಾದಹಳ್ಳಿ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಜ್ಞಾನವಿಕಾಸ ಕೇಂದ್ರದ ಮಹಿಳೆಯರಿಗೆ ಮಂಗಳವಾರ ಆಯೋಜಿಸಿದ್ದ ಮಹಿಳಾ ಸಬಲೀಕರಣ ಮತ್ತು ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ತಡೆಗಟ್ಟುವಿಕೆ ಬಗ್ಗೆ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳೆಯರ ಮೇಲೆ ಅನೇಕ ರೀತಿಯಲ್ಲಿ ದೌರ್ಜನ್ಯ ನಡೆಯುತ್ತಿದೆ. ಅದನ್ನು ಮಹಿಳೆಯರು ಸಹಿಸಿಕೊಂಡು, ನೋವು ಅನುಭವಿಸಿ ಸಹನಾಮೂರ್ತಿಗಳಾಗಿದ್ದಾರೆ. ಮಹಿಳೆಯರಿಗಾಗಿ ಸಮಾನ ಹಕ್ಕುಗಳು ಸಿಗುತ್ತಿಲ್ಲ ಎನ್ನುವ ಕಾರಣಕ್ಕಾಗಿ ಹಲವಾರು ಕಾನೂನು ಜಾರಿಗೆ ತರಲಾಗಿದೆ ಎಂದರು.

ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಆಸ್ತಿ ಹಂಚಿಕೆ, ಬಾಲ್ಯವಿವಾಹ ಆದಾಗ ಎಲ್ಲಿ ನಮಗೆ ರಕ್ಷಣೆ ಸಿಗುತ್ತದೆ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಸಂಘಗಳನ್ನು ರಚಿಸಿ, ಅದರ ಮೂಲಕ ಮಹಿಳೆಯರಿಗೆ ಲಿಂಗತ್ವ, ವಿವಾಹ ಕಾಯ್ದೆ, ಸಮಾನ ಕೂಲಿ ಕಾಯ್ದೆ, ಆಸ್ತಿ ಹಂಚಿಕೆ ಮತ್ತಿತರ ವಿಷಯಗಳ ಬಗ್ಗೆ ಇನ್ನಿತರ ಕಾನೂನುಗಳ ಬಗ್ಗೆ ಅರಿವು ನೀಡಲಾಗುತ್ತಿದೆ. ಅದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸೇವಾ ಪ್ರತಿನಿಧಿ ಶಾಂತಮ್ಮ, ಸುಧಾ, ಮಹಿಳಾ ಸಂಘದ ಸದಸ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net