ಮಠದ ಪಂಚಾಂಗಗಳ ಬಿಡುಗಡೆ

16raju1
Published on

ಚಾಮರಾಜನಗರ: ನೂತನ ಸಂವತ್ಸರದ ಒಂಟಿಕೊಪ್ಪಲ್, ಉಡುಪಿ ಉತ್ತರಾದಿ ಮತ್ತು ರಾಘವೇಂದ್ರ ಮಠದ ಪಂಚಾಂಗಗಳನ್ನು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಎಸ್. ಭಾರತಿ ಬಿಡುಗಡೆಗೊಳಿಸಿದರು.


ನಂದಾದೀಪ ಫೈನಾನ್ಸಿಯರ್ ಸರ್ವೀಸ್ ಮತ್ತು ಜನಾರ್ದನ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಒಂಟಿಕೊಪ್ಪಲ್ ಪಂಚಾಂಗ ಬಹಳ ಹಳೆಯದು. ಹಿಂದಿನಿಂದಲೂ ಪಂಚಾಂಗಗಳು ಮನುಷ್ಯ ಜೀವನದಲ್ಲಿ ಹಾಸು ಹೊಕ್ಕಾಗಿವೆ ಎಂದರು.


ಜನಾರ್ದನ ಪ್ರತಿಷ್ಠಾನ ಅಧ್ಯಕ್ಷ ಅರ್ಚಕ ಅನಂತಪ್ರಸಾದ್ ಮಾತನಾಡಿ, ಒಂಟಿಕೊಪ್ಪಲ್ ಪಂಚಾಂಗದ ಮೂಲ ಕರ್ತೃ ಚಾಮರಾಜನಗರದ ತಿಮ್ಮಯ್ಯಶಾಸ್ತ್ರೀಗಳು ಎಂಬುದು ಹೆಮ್ಮೆಯ ವಿಷಯ. ಶುಭ ಮತ್ತು ಅಶುಭ ಕಾರ್ಯಗಳೇ ಇರಲಿ ಪಂಚಾಂಗಗಳನ್ನು ನೋಡಿ ಮುಂದಿನ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ ಎಂದು ಹೇಳಿದರು.
ಹಿಂದುಗಳ ಸೌರಮಾನ, ಚಾಂದ್ರಮಾನ ರೀತಿಯ ಕಾಲಗಣನೆಗೆ ಪಂಚಾಂಗವೆಂದು ಕರೆಯುತ್ತಾರೆ. ಪಂಚಾಂಗವೆಂದರೆ, ಐದು ಅಂಗಗಳನ್ನು ಒಳಗೊಂಡದ್ದು. ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣಗಳು ಇವೇ ಆ ಐದು ಅಂಗಗಳು. ಇವುಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ತಿಳಿಸುವಂಥದ್ದು ಪಂಚಾಂಗ ಎಂದು ತಿಳಿಸಿದರು.


ವರ್ಷಪೂರ್ತಿ ಬರುವ ಎಲ್ಲ ಹಬ್ಬ ಹರಿದಿನಗಳು, ರಥೋತ್ಸವಗಳು, ಮಹಾತ್ಮರ ಜನ್ಮ ದಿನಾಚರಣೆಗಳ ಬಗ್ಗೆ ಪೂರ್ಣ ವಿವರಗಳನ್ನು ಪಂಚಾಂಗಗಳು ಕೊಡುತ್ತವೆ. ರಾಶಿ ಆಧಾರದ ಮೇಲೆ ವೃತ್ತಿ, ಹಣಕಾಸು, ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕ್ಷೇತ್ರಗಳ ವಿಶ್ಲೇಷಣೆ ಸಿಗುತ್ತದೆ. ಈ ಭವಿಷ್ಯವಾಣಿಗಳು ಗುರು, ಶನಿ, ರಾಹು ಮತ್ತು ಕೇತುಗಳ ಸಂಚಾರಗಳ ಮೇಲೆ ಆಧಾರಿತವಾಗಿವೆ. ವೃತ್ತಿ, ಶಿಕ್ಷಣ, ಆದಾಯ, ಆರೋಗ್ಯ ಮತ್ತು ಕುಟುಂಬ ದಂತಹ ವಾರ್ಷಿಕ ಜಾತಕವು ನಿಮಗೆ ಒಂದು ದೃಷ್ಟಿಕೋನ ನೀಡುತ್ತದೆ. ಮೇಷ ದಿಂದ ಮೀನರಾಶಿಯವರೆಗಿನ ಪ್ರತಿಯೊಂದು ರಾಶಿಗೂ ಪ್ರತ್ಯೇಕ ವರದಿಯನ್ನು ಪಂಚಾಂಗಗಳು ನೀಡುತ್ತವೆ ಎಂದು ಹೇಳಿದರು.
ಬಿ.ಕೆ. ಮೋಹನ್, ವಾಸುದೇವರಾವ್, ಸತೀಶ್, ರಶ್ಮಿಶಂಕರ್, ನಂದಾ ಭಾರಧ್ವಾಜ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net