

ಚಾಮರಾಜನಗರ: ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ವಿವಾದದ ವಿಚಾರವನ್ನು ಗಡಿ, ಕಟ್ಟೆ ಯಜಮಾನರ ತೀರ್ಮಾನಕ್ಕೆ ಬಿಡಬೇಕೆಂದು ಒಮ್ಮತದಿಂದ ನಿರ್ಧರಿಸಲಾಯಿತು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲೂಕು ಡಾ.ಬಿ.ಆರ್.ಅಂಬೇಡ್ಕರ್ ಒಕ್ಕೂಟಗಳ ಸಂಘದ ಅಧ್ಯಕ್ಷ ಸಿ.ಕೆ.ಮಂಜುನಾಥ್ ಶನಿವಾರ ಕರೆದಿದ್ದ ಸೌಹಾರ್ದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಸಂಘದ ಆಸ್ತಿ ವಿವಾದದಿಂದ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದೆ. ಬೇರೆ ಸಮಾಜದವರು ಒಗ್ಗಟ್ಟಿನಿಂದ ಮುಂದೆ ಸಾಗುತ್ತಿದ್ದು, ನಮ್ಮಲ್ಲೇ ಕಾಲೆಳೆಯುವ ಕೆಲಸವಾಗುತ್ತಿದೆ. ಇದರ ಬದಲು ಸಂಘದ ಆಸ್ತಿ ವಿವಾದದ ಕುರಿತು ಮಂಗಲ ದೊಡ್ಡಗಡಿಗೆ ಪತ್ರ ಬರೆದು ತಿಳಿಸಬೇಕು. ಗಡಿ, ಕಟ್ಟೆ ಯಜಮಾನರು ಈ ವಿಚಾರದಲ್ಲಿ ಏನು ತೀರ್ಮಾನ ಕೈಗೊಳ್ಳುತ್ತಾರೋ ಅದೇ ಅಂತಿಮ ಎಂದು ಎಲ್ಲರೂ ಒಪ್ಪಿಕೊಂಡರು.
ಸಿ.ಕೆ.ಮಂಜುನಾಥ್ ಮಾತನಾಡಿ, ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಅಯ್ಯನಪುರ ಶಿವಕುಮಾರ್ ಹೇಳಿದ್ದಕ್ಕೆ ನಾನು ಸಭೆ ಕರೆದೆ. ಆದರೆ ಅವರು ಸಭೆಗೆ ಬಂದಿಲ್ಲ. ಸಮಾಜದ ಆಸ್ತಿ ಉಳಿಸಬೇಕೇ ಹೊರತು ಪ್ರತಿಷ್ಠೆಯಾಗಿ ಸ್ವೀಕಾರ ಮಾಡಿ ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು. ಸಮುದಾಯದ ಒಗ್ಗಟ್ಟು ಕಾಪಾಡಬೇಕು, ವಿದ್ಯಾರ್ಥಿ ನಿಲಯ ಉಳಿಸಬೇಕು. ಈ ನಿಟ್ಟಿನಲ್ಲಿ ಸಭೆ ಕರೆದಿದ್ದು, ಎಲ್ಲರ ತೀರ್ಮಾನದಂತೆ ಮುಂದಿನ ಹೆಜ್ಜೆ ಇಡೋಣ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ನಲ್ಲೂರು ಶ್ರೀನಾಥ್ ಮಾತನಾಡಿ, ನಂಜುಂಡಸ್ವಾಮಿ ನಮ್ಮ ಸಮಾಜದ ಹಿರಿಯರು ಒಬ್ಬರ ವಿರುದ್ಧ ವೈಯಕ್ತಿಕವಾಗಿ ಹೋರಾಟ ಮಾಡುವುದನ್ನು ಬಿಟ್ಟು ಸಮಾಜವನ್ನು ಜತೆಗೆ ಕೊಂಡೊಯ್ಯಬೇಕು. ಈ ಆಸ್ತಿ ಅಯ್ಯನಪುರ ಶಿವಕುಮಾರ್ ಒಬ್ಬರಿಗೇ ಸೇರಿದ್ದಲ್ಲ. ಸಮಾಜದ ಎಲ್ಲರಿಗೂ ಸೇರಿದೆ. ಅವರೊಬ್ಬರೇ ತೀರ್ಮಾನ ತೆಗೆದುಕೊಳ್ಳುವಂತಿಲ್ಲ ಎಂದರು.
ಹೊಂಗನೂರು ಗ್ರಾಮ ಪಂಚಾಯಿತಿ ಸದಸ್ಯ ರವಿಕುಮಾರ್ ಮಾತನಾಡಿ, ಬೇರೆ ಸಮುದಾಯಗಳು ಒಗ್ಗಟ್ಟಿನಿಂದ ಇವೆ. ಅವರನ್ನು ನೋಡಿ ನಾವು ಕಲಿಯುವುದಿದೆ. ಯಾರಾದರೂ ನಮ್ಮಲ್ಲೇ ಬೆಳೆಯುತ್ತಾರೆ ಎಂದರೆ ನಮ್ಮವರೇ ಕಾಳೆಯುತ್ತಾರೆ. ಸಿ.ಕೆ.ಮಂಜುನಾಥ್ ಕರೆದಿರುವ ಸಭೆಗೆ ಹೋಗಬೇಡಿ ಎಂದು ಕೆಲವರು ಹೇಳುವುದು ಎಷ್ಟು ಸರಿ?. ಇದು ವೈಯಕ್ತಿಕ ಆಸ್ತಿಯಲ್ಲ. ನಮ್ಮೆಲ್ಲರ ಆಸ್ತಿಯಾಗಿದ್ದು, ಗಡಿ, ಕಟ್ಟೆ ಯಜಮಾನರು ಕೂಡಲೇ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಉತ್ತವಳ್ಳಿ ಮಹೇಶ್ ಮಾತನಾಡಿ, ಈ ಸಮಸ್ಯೆಗೆ ಬೇಗ ಪರಿಹಾರ ಕಂಡುಕೊಳ್ಳಬೇಕು. ನಮ್ಮ ಜನಾಂಗದ ಗೌರವ ಇದ್ದಷ್ಟೂ ಹಾಳಾಗುತ್ತಿದೆ. ಇನ್ನು ಮುಂದೆ ಈ ರೀತಿ ಆಗಬಾರದು. ಎರಡೂ ಕಡೆಯವರು ಒಟ್ಟಿಗೆ ಸೇರಿ ಒಮ್ಮತದ ತೀರ್ಮಾನ ಮಾಡಬೇಕು. ಒಬ್ಬರ ವಿರುದ್ಧ ಮತ್ತೊಬ್ಬರು ಸುದ್ದಿಗೋಷ್ಠಿ ಮಾಡುವುದನ್ನು ಬಿಡಬೇಕು ಎಂದು ಸಲಹೆ ನೀಡಿದರು.
ಹೊಂಗನೂರು ಗಡಿ ಯಜಮಾನ ನಾಗಯ್ಯ ಮಾತನಾಡಿ, ಸಮುದಾಯದ ಎಲ್ಲ ಗಡಿ, ಕಟ್ಟೆ ಯಜಮಾನರ ಮುಂದೆ ಆಸ್ತಿ ವಿವಾದದ ವಿಚಾರವನ್ನು ಇಡೋಣ. ನಮ್ಮ ಸಮಾಜದ ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳೋಣ ಎಂದರು. ಸಂಘದ ನಿರ್ದೆಶಕ ಎಸ್.ಮಹದೇವಯ್ಯ ಮಾತನಾಡಿ, ಗಡಿ, ಕಟ್ಟೆ ಯಜಮಾನರ ಅಂತಿಮ ತೀರ್ಮಾನವನ್ನು ಒಪ್ಪಿಕೊಳ್ಳೋಣ. ಅಯ್ಯನಪುರ ಶಿವಕುಮಾರ್ ಮತ್ತು ಇತರರು ನನ್ನ ಮನೆಗೆ ಬಂದು ಈ ವಿಚಾರವನ್ನು ಹೇಳಿದಾಗ ಗಡಿ, ಕಟ್ಟೆ ಯಜಮಾನರಿಗೆ ತಿಳಿಸೋಣ ಎಂದಿದ್ದೆ. ಆದರೆ ಅವರು ಸುದ್ದಿಗೋಷ್ಠಿ ಮಾಡಿಬಿಟ್ಟರು ಎಂದರು.
ಗಡಿ ಯಜಮಾನರಾದ ನಾಗರಾಜು, ಮಾದು, ಮುಖಂಡರಾದ ಜ್ಯೋತಿಗೌಡನಪುರ ವೆಂಕಟೇಶ್, ಎಂ.ಎಸ್.ಮಾದಯ್ಯ ಮರಿಯಾಲದಹುಂಡಿ, ಕಾಗಲವಾಡಿ ಜಯಶಂಕರಮೂರ್ತಿ, ಹೊಂಗನೂರು ರಾಮಯ್ಯ, ಚಂದಕವಾಡಿ ಗ್ರಾಮ ಪಂಚಾಯಿತಿ ಸದಸ್ಯ ಪುಟ್ಟಸ್ವಾಮಿ, ಪರಮೇಶ್ ಮತ್ತು ಇತರರರು ಹಾಜರಿದ್ದರು.