

ಚಾಮರಾಜನಗರ : ಅಧ್ಯಾಪಕರ ಮಾರ್ಗದರ್ಶನದೊಂದಿಗೆ ಪರಿಶ್ರಮದಿಂದ ಅಧ್ಯಯನ ಮಾಡಿದ್ದೇ ಆದಲ್ಲಿ ಯಶಸ್ಸು ಸಾಧಿಸಬಹುದಾಗಿದೆ ಎಂದು ಸಂದರ್ಶಕ ಪ್ರಾಧ್ಯಾಪಕ ಪ್ರೊ. ಕೃಷ್ಣಮೂರ್ತಿ ಹನೂರು ಹೇಳಿದರು.
ಚಾಮರಾಜನಗರ ವಿಶ್ವವಿದ್ಯಾಲಯದ ಕನ್ನಡ ಮತ್ತು ಜಾನಪದ ವಿಭಾಗದ ವತಿಯಿಂದ ವಿಶ್ವವಿದ್ಯಾಲಯದಲ್ಲಿರುವ ಸುವರ್ಣಗಂಗೋತ್ರಿಯ ನಿಜಗುಣ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಹಿರಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಮತ್ತು ಚಿನ್ನದ ಪದಕ ಪಡೆದ ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಬದುಕು ಕಟ್ಟಿಕೊಳ್ಳಲು ಚಾಮರಾಜನಗರ ವಿವಿಯಲ್ಲಿ ಉತ್ತಮ ವಾತಾವರಣವಿದೆ. ಕನ್ನಡ ವಿಭಾಗದ ವಿದ್ಯಾರ್ಥಿಗಳು 9 ವರ್ಷಗಳಿಂದ ನಿರಂತರವಾಗಿ ಚಿನ್ನದ ಪದಕ ಮತ್ತು ನಗದು ಬಹುಮಾನ ಪಡೆದುಕೊಂಡಿರುವುದೇ ಇದಕ್ಕೆ ಸಾಕ್ಷಿ. ಜತೆಗೆ ಸರ್ಕಾರಿ ಹುದ್ದೆಗಳನ್ನು ಸಹ ಪಡೆದುಕೊಂಡಿದ್ದಾರೆ ಎಂದರು.
ವಿಮರ್ಶಕ ಕುಪ್ನಳ್ಳಿ ಎಂ. ಭೈರಪ್ಪ ಮಾತನಾಡಿ, ಕನ್ನಡ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಹಲವಾರು ಕ್ಷೇತ್ರಗಳಲ್ಲಿ ಉದ್ಯೋಗದ ಅವಕಾಶಗಳಿದ್ದು, ಸರ್ಕಾರದ ಎಲ್ಲ ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಕನ್ನಡ ಸಾಮಾನ್ಯ ಪತ್ರಿಕೆಯಾಗಿ, ಕಡ್ಡಾಯ ಕನ್ನಡ ಪತ್ರಿಕೆಯಾಗಿ ಹಾಗೂ ಮುಖ್ಯ ಪತ್ರಿಕೆಯಾಗಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಪಠ್ಯಕ್ರಮಗಳಿವೆ. ವಿದ್ಯಾರ್ಥಿಗಳು ಆಳವಾದ ಅಧ್ಯಯನ ಮಾಡಿ ಜ್ಞಾನ ಪಡೆದುಕೊಂಡು ಗುರಿ ತಲುಪಬೇಕು ಎಂದರು.
ಕುಲಪತಿ ಪ್ರೊ. ಎಂ.ಆರ್.ಗಂಗಾಧರ್ ಮಾತನಾಡಿ, ಅವರು ವಿದ್ಯಾರ್ಥಿಗಳಲ್ಲಿ ಶಿಸ್ತು, ಪರಿಶ್ರಮ ಹಾಗೂ ಭವಿಷ್ಯದ ಬಗೆಗೆ ನಿಖರವಾದ ಯೋಜನೆಗಳಿದ್ದರೆ ಯಶಸ್ವಿ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಸಾಧನೆ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಸನ್ಮಾನ ಸ್ವೀಕರಿಸಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ ಚಂದನಾ ಅವರು ತರಗತಿಗಳಲ್ಲಿ ಉತ್ತಮ ಹಾಗೂ ಗುಣಮಟ್ಟದ ಬೋಧನೆ, ಗುರುಗಳ ಮಾರ್ಗದರ್ಶನ ಹಾಗೂ ಇಲ್ಲಿನ ಗ್ರಂಥಾಲಯ ನನ್ನ ಸಾಧನೆ ಸ್ಪೂರ್ತಿಯಾಯಿತು ಎಂದರು. ಕನ್ನಡ ವಿಭಾಗದ ಮುಖ್ಯಸ್ಥ ಬಸವಣ್ಣ ಮೂಕಹಳ್ಳಿ, ಜಾನಪದ ವಿಭಾಗದ ಮುಖ್ಯಸ್ಥ ಡಾ ಶಿವರಾಜು, ಉಪನ್ಯಾಸಕರಾದ ಡಾ. ಮಹೇಶ್ ಬಾಬು, ಬಿ. ಗುರುರಾಜು, ಪಿ. ರಾಣಿ, ಡಾ. ಆರ್. ಶಶಿಕಲಾ, ಡಾ. ಜಗದೀಶ್, ಡಾ. ಆರ್. ಮಹೇಶ್, ಚಿನ್ನದ ಪದಕ ವಿಜೇತರಾದ ಆರ್.ತೇಜಸ್ವಿನಿ, ಮಣಿಕಂಠ ಮತ್ತು ವಿದ್ಯಾರ್ಥಿಗಳು ಇದ್ದರು.