

ಚಾಮರಾಜನಗರ: ರೋಟರಿ ಸಂಸ್ಥೆ ವತಿಯಿಂದ ಭಾನುವಾರ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರ ಬಹಳ ಯಶಸ್ವಿಯಾಗಿ ನಡೆಯಿತು.
ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ರೋಟರಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮ, ಅರವಿಂದ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ನಡೆದ ಕಣ್ಣಿನ ಉಚಿತ ತಪಾಸಣೆ ಶಿಬಿರದಲ್ಲಿ 340 ಜನರು ತಪಾಸಣೆ ಮಾಡಿಸಿಕೊಂಡರು. 205 ಜನ ಕಣ್ಣಿನ ಸಮಸ್ಯೆ ಇದ್ದವರನ್ನು ಶಸ್ತ್ರಚಿಕಿತ್ಸೆಗೆ ಆಯ್ಕೆಯಾಗಿದ್ದು, ಅವರನ್ನು ಕೊಯಂಬತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆಗೆ ಕರೆದೊಯ್ಯಲು ಶಿಬಿರದಲ್ಲಿ ವ್ಯವಸ್ಥೆ ಮಾಡಲಾಯಿತು.
ಈ ವೇಳೆ ರೋಟರಿ ಸಂಸ್ಥೆ ಅಧ್ಯಕ್ಷ ರಾಮಸಮುದ್ರ ನಾಗರಾಜು ಮಾತನಾಡಿ, ಮನುಷ್ಯನ ಅಂಗಗಳಲ್ಲಿ ಕಣ್ಣು ಬಹುಮುಖ್ಯವಾಗಿದೆ. ಅದರ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು. ಕಣ್ಣಿನ ದೃಷ್ಠಿ ಎಲ್ಲರಿಗೂ ಮಹತ್ವದ್ದು, ಅದರಲ್ಲೂ ವಿಶೇಷವಾಗಿ ಮಹಿಳೆಯರು, ವಯೋವೃದ್ದರೇ ಹೆಚ್ಚಿನ ಸಂಖ್ಯೆಯಲ್ಲಿ ಕಣ್ಣಿನ ಪೊರೆಗೆ ತುತ್ತಾಗುತ್ತಿದ್ದಾರೆ. ಆರ್ಥಿಕವಾಗಿ ದುರ್ಬಲರಾಗಿದ್ದು, ದಿನನಿತ್ಯ ಜೀವನದಲ್ಲಿ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಅವರಿಗೆ ಅನುಕೂಲ ಕಲ್ಪಿಸಲು ರೋಟರಿ ಸಂಸ್ಥೆಯು ಪ್ರತಿ ತಿಂಗಳು ಮೊದಲನೆಯ ಭಾನುವಾರ ನೇತ್ರ ತಪಾಸಣಾ ಶಿಬಿರವನ್ನು ಅಯೋಜಿಸಿದ್ದು, ಇದರ ಸದುಪಯೋಗವನ್ನು ಜನತೆ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ರೋಟರಿ ಸಂಸ್ಥೆಯ ಕಾರ್ಯದರ್ಶಿ ಎಚ್.ಎಂ.ಗುರುಸ್ವಾಮಿ, ಮಾಜಿ ಅಧ್ತಕ್ಷ ಸಿ.ಎಸ್.ಚಂದ್ರಪ್ರಭಜೈನ್, ಮಾಜಿ ಕಾರ್ಯದರ್ಶಿ ಅಬ್ದುಲ್ ಅಜೀಜ್ ದೀನಾ, ರೋಟರಿ ಸಂಸ್ಥಾಪಕ ಸದಸ್ಯ ಸಿ.ವಿ.ಶ್ರೀನಿವಾಸಶೆಟ್ಟಿ, ಯೋಗರಾಜು, ರಾಜು ವರ್ಗೀಶ್, ಎ.ಶ್ರೀನಿವಾಸನ್, ಪಿಆರಓ ವಿಜಯಕಾಂತ್ ಇತರರು ಹಾಜರಿದ್ದರು.