

ಚಾಮರಾಜನಗರ: ಜಿಲ್ಲೆಯ ಭಾಷಾ ಸೊಗಡನ್ನು ಹೊಂದಿರುವ, ಸ್ಥಳೀಯ ಕಲಾವಿದರೇ ಹೆಚ್ಚಾಗಿ ನಟಿಸಿರುವ ಸಾಹಿತಿ ಹನೂರು ಚೆನ್ನಪ್ಪ ಅವರ ಕಥೆ ಆಧಾರಿತ ಅನ್ನ ಸಿನಿಮಾದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿ ಬಹಳಷ್ಟು ಸದ್ದು ಮಾಡುತ್ತಿದೆ.
ಹನೂರು ತಾಲೂಕಿನ ಖ್ಯಾತ ಕಥೆಗಾರರಾದ ಹನೂರು ಚೆನ್ನಪ್ಪ ಅವರು ಬರೆದಿರುವ ಕಥೆ ಆಧಾರಿತ ಸಿನಿಮಾವನ್ನು ಗಗನ್ ಪಿಕ್ಚರ್ ವತಿಯಿಂದ ನಿರ್ಮಾಣಮಾಡಲಾಗಿದೆ. ಈ ಸಿನಿಮಾವನ್ನು ಯುವ ನಿರ್ದೇಶಕ ಎನ್.ಎಸ್.ಇಸ್ಲಾಹುದ್ದೀನ್ ನಿರ್ದೇಶನ ಮಾಡಿದ್ದು, ಚಿತ್ರ ಬಿಡುಗಡೆಗೂ ಮುನ್ನವೇ ಸಾಕಷ್ಟು ಸದ್ದುಮಾಡುತ್ತಿದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ನಿರ್ಮಾಣವಾಗಿರುವ ಸಿನಿಮಾದ ಟೀಸರ್ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಮಾಜಿಕ ಜಾಲತಾಣಗಳಲ್ಲಿ ಸಿನಿಮಾದ ಟೀಸರ್ ಹಂಚಿಕೊಳ್ಳುತ್ತಿರುವ ಜನರು ಚಾಮರಾಜನಗರ ಭಾಷೆಗೆ ಸೊಗಡಿನ ಚಿತ್ರ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೂ ಸಿನಿಮಾದ ಟೀಸರ್‌ನಲ್ಲಿ ಮಲೆ ಮಹದೇಶ್ವರರ ಪೋಟೋವನ್ನು ತೋರಿಸಿ, ಗ್ರಾಮೀಣ ಭಾಗದ ಕಥೆ ಇದಾಗಿದೆ ಎಂಬುದನ್ನು ಬಿಂಬಿಸಲಾಗಿದೆ. ಜಾನಪದ ಕಲೆಗಳಾದ ಕಂಸಾಳೆ, ಗೊರವರ ಕುಣಿತ, ಡೊಳ್ಳುಕುಣಿತ ಹಾಗೂ ಇನ್ನಿತರೆ ಕಲೆಗಳನ್ನು ಟೀಸರ್‌ನಲ್ಲಿ ಕಟ್ಟಿಕೊಡಲಾಗಿದೆ. ಹಸಿದ ಜೀವಗಳು ಹಾಗೂ ಅನ್ನದ ಮಹತ್ವವನ್ನು ಕ್ಷಣಮಾತ್ರದಲ್ಲಿ ಹೇಳಲು ಹೊರಟಿರುವ ಟೀಸರ್ ಚಾಮರಾಜನಗರ ಭಾಗದ ಭಾಷೆಯ ಸೊಗಡನ್ನು ಸಂಪೂರ್ಣವಾಗಿ ಒಳಗೊಂಡಿರುವುದರಿಂದ ಸಾಕಷ್ಟು ಜನರು ಅನ್ನ ಸಿನಿಮಾ ಟೀಸರ್‌ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.