ತಾರ್ಕಿಕ ಅಂತ್ಯಕ್ಕೆ ವೇಣುಗೋಪಾಲ್ ಕೊಲೆ ಪ್ರಕರಣ

052
Published on

ಚಾಮರಾಜನಗರ: ಟಿ.ನರಸೀಪುರ ಯುವ ಬ್ರಿಗೇಡ್ ಸಂಚಾಲಕ ವೇಣುಗೋಪಾಲ್ ಕೊಲೆ ಪ್ರಕರಣವನ್ನು ತಾರ್ಕಿಕ ಅಂತ್ಯಗೊಳಿಸಲಾಗುವುದು ಎಂದು ದಕ್ಷಿಣ ವಲಯದ ಇನ್ಸ್‌ಪೆಕ್ಟರ್ ಜನರಲ್ ಆ್ ಪೋಲೀಸ್ ಬೋರಲಿಂಗಯ್ಯ ಹೇಳಿದರು.

ನಗರದಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಲು, ಇದೇ ಮೊದಲ ಬಾರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಗುರುವಾರ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಟಿ.ನರಸೀಪುರ ಯುವ ಬ್ರಿಗೇಡ್ ಸಂಚಾಲಕ ವೇಣುಗೋಪಾಲ್ ಕೊಲೆ ಪ್ರಕರಣ ಕುರಿತು ಈಗಾಗಲೇ ನಮ್ಮ ಹಿರಿಯ ಅಧಿಕಾರಿಗಳು ಮಾತನಾಡಿದ್ದಾರೆ. ಘಟನೆ ತಡೆಯೋ ವಿಚಾರವಾಗಿ ಪೊಲೀಸರಿಂದ ಸಣ್ಣಪುಟ್ಟ ತಪ್ಪಾಗಿದೆ.ಅವಘಡ ತಡೆಯುವಲ್ಲಿ ವಿಫಲರಾಗಿದ್ದೇವೆ. ಆದರೆ ಘಟನೆ ಬಳಿಕ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣವನ್ನ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದರು.

ಈ ಪ್ರಕರಣದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಏನು ಮಾಡಬೇಕೋ ಅದನ್ನ ಮಾಡಿದ್ದೇವೆ. ಪುನೀತ್ ಫೋಟೋ ತೆರವುಗೊಳಿಸಿದ್ದೆ ಕೊಲೆಗೆ ಕಾರಣವಾಯ್ತ ಎಂಬ ವಿಚಾರ ಫೋಟೋ ವಿಚಾರ, ಬೈಕ ಬಿಡಲಿಲ್ಲ ಎಂಬ ವಿಚಾರಗಳ ಬಗ್ಗೆ ಮಾಹಿತಿ ಲಭ್ಯವಾಗುತ್ತಿದೆ. ಇದರಲ್ಲಿ ಹಳೆ ವೈಷಮ್ಯವೂ ಇರಬಹುದು, ತನಿಖೆ ಸಂಪೂರ್ಣ ಆದ ಬಳಿಕ ಎಲ್ಲ ವಿವರ ತಿಳಿಯಲಿದೆ ಎಂದು ತಿಳಿಸಿದರು.

ಸತತ 3 ಗಂಟೆ ಸಭೆ:
ಅಧಿಕಾರ ವಹಿಸಿಕೊಂಡ ನಂತರ ಜಿಲ್ಲೆಗೆ ಪ್ರಥಮ ಬಾರಿಗೆ ಭೇಟಿ ನೀಡಿದ ದಕ್ಷಿಣ ವಲಯ ಐಜಿ ಬೋರಲಿಂಗಯ್ಯ ಪೊಲೀಸ್ ಅಧಿಕಾರಿಗಳ ಜತೆ ಸತತ 3 ಗಂಟೆಗಳ ಕಾಲ ಸಭೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಯಾವುದೇ ಸಮಸ್ಯೆ ಹೊತ್ತುಕೊಂಡು ನಾಗರಿಕರು ಪೊಲೀಸರ ಬಳಿ ಬಂದಾಗ ಸುಲಭವಾಗಿ ಕೆಲಸ ಆಗಬೇಕು. ಜನಸ್ನೇಹಿ ಪೊಲೀಸ್ ವಾತಾವರಣ ನಿರ್ಮಾಣ ಮಾಡುವ ಉದ್ದೇಶ ಇಲಾಖೆಯದ್ದಾಗಿದೆ. ಈ ವ್ಯಾಪ್ತಿಯ ಅಪರಾಧ ಪ್ರಕರಣಗಳ ಬಗ್ಗೆ ಅರಿವಿದೆ. ಇಲ್ಲಿ ಗಾಂಜಾ ಬೆಳೆದು ಬೇರೆ ಕಡೆ ಮಾರಾಟ ಮಾಡುತ್ತಾರೆ ಎಂಬ ಮಾಹಿತಿ ಇದೆ. ಈ ಎಲ್ಲ ವಿಚಾರಗಳ ಕುರಿತು ಚರ್ಚಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಎಸ್ಪಿ ಪದ್ಮಿನಿ ಸಾಹು, ಡಿವೈಎಸ್ಪಿ ಹಾಗೂ ಎಲ್ಲಾ ಠಾಣೆಗಳ ಪಿಎಸ್‌ಐಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net