

ಚಾಮರಾಜನಗರ: ಸ್ವಯಂ ಅರಿವಿನಿಂದ ಆಂತರಿಕ ಶಕ್ತಿ ವೃದ್ಧಿಯಾಗುತ್ತದೆ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಮುಖ್ಯ ಸಂಚಾಲಕಿ ರಾಜ ಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಅಭಿಪ್ರಾಯಪಟ್ಟರು.
ತಾಲೂಕಿನ ತೆರಕಣಾಂಂಬಿ ಗ್ರಾಮದಲ್ಲಿರುವ ಮುರಾರ್ಜಿ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯುವ ಸ್ಪಂದನ ಮತ್ತು ಮೊರಾರ್ಜಿ ವಸತಿ ಶಾಲೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ವ್ಯಕ್ತಿತ್ವ ಬೆಳವಣಿಗೆ ಮತ್ತು ಜೀವನ ಕೌಶಲ್ಯ ಕುರಿತು ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಿರಂತರ ಅಧ್ಯಯನದಿಂದ ಬದುಕಿನಲ್ಲಿ ಯಶಸ್ಸನ್ನು ಸಾಧಿಸಬಹುದು. ಅದಕ್ಕೆ ಅಗತ್ಯವಾದ ಏಕಾಗ್ರತೆಯನ್ನು ಅಧ್ಯಾತ್ಮ ನೀಡುತ್ತದೆ. ಮಾನಸಿಕ ಶಾಂತಿ ಇಲ್ಲದಿದ್ದರೆ, ಒಂದು ಕೆಲಸಕ್ಕೆ ನಾಲ್ಕು ಪಟ್ಟು ಸಮಯ ವ್ಯರ್ಥವಾಗುತ್ತದೆ ಎಂದರು.
ಬಾಲ ನ್ಯಾಯ ಮಂಡಳಿ ಸದಸ್ಯ ಟಿ.ಜೆ.ಸುರೇಶ್ ಮಾತನಾಡಿ, ಪ್ರತಿಯೊಬ್ಬ ಪಾಲಕರು ನಾನು ರಾಷ್ಟ್ರದ ಆಧಾರ ಸ್ತಂಭವನ್ನು ನಿರ್ಮಿಸುತ್ತಿದ್ದೇನೆ ಎಂಬ ವ್ಯಾಪಕ ದೃಷ್ಟಿಯನ್ನು ಇಟ್ಟುಕೊಂಡು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡುವ ಅವಶ್ಯಕತೆ ಇದೆ. ವ್ಯಕ್ತಿತ್ವ ವಿಕಸನದಿಂದ ಮಕ್ಕಳು ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಆತ್ಮವಿಶ್ವಾಸ ಮತ್ತು ಸ್ವಾಭಿಮಾನವನ್ನು ಬೆಳೆಸಲು ಅವರ ಸಾಮಾಜಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಅವಶ್ಯಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲ ಮಹಾದೇವ ಪ್ರಸಾದ್, ಶಿಕ್ಷಕರಾದ ಟಿ.ಎಸ್.ಮಂಜು, ಯುವ ಸ್ಪಂದನ ಗುರುರಾಜ್, ಮನೋಜ್ ಕುಮಾರ್, ಓಂ ಶಾಂತಿ ಬಿ.ಕೆ.ಆರಾಧ್ಯ ಹಾಜರಿದ್ದರು.