

ಚಾಮರಾಜನಗರ: ತಾಲೂಕಿನ ಹೆಗ್ಗೋಠಾರ ಗ್ರಾಮದ ಸಿದ್ದರಾಮಪ್ಪ(62)ಸಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಸಂಬಂಧಿಕರು ವೈದ್ಯರ ನಿರ್ಲಕ್ಷ್ಯದಿಂದ ಸಾವಾಗಿದೆ ಎಂದು ಆರೋಪ ಮಾಡಿದ್ದಾರೆ.
ಹೆಗ್ಗೋಠಾರ ಗ್ರಾಮದ ಸಿದ್ದರಾಮಪ್ಪ ಅವರಿಗೆ ಬುಧವಾರ ತಡರಾತ್ರಿ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ರಾತ್ರಿಯೇ ಸಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯಾವುದೇ ವೈದ್ಯರು ಭೇಟಿ ನೀಡದೆ, ಕೆಲವು ನರ್ಸ್‌ಗಳು ಮಾತ್ರ ಪರೀಕ್ಷಿಸಿ ಮೈಸೂರಿಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ರೋಗಿಗೆ ವೆಂಟಿಲೇಟರ್ ಈ ಸಮಯದಲ್ಲಿ ಅಗತ್ಯವಾಗಿ ಬೇಕಿತ್ತು, ಆದರೆ ಸೂಕ್ತ ಸಮಯಕ್ಕೆ ವೈದ್ಯರು ವೆಂಟಿಲೇಟರ್ ವ್ಯವಸ್ಥೆ ಮಾಡಲಿಲ್ಲ. ಈ ವೇಳೆ ವೆಂಟಿಲೇಟರ್ ಇರುವ ಆಂಬುಲೆನ್ಸ್ ಕೂಡ ಲಭ್ಯವಿಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಯಿತು ಎಂದು ಮೃತ ಸಿದ್ದರಾಮಪ್ಪ ಸಹೋದರ ಮರಿಸ್ವಾಮಿ ದೂರಿದರು.
ಜಿಲ್ಲಾ ಆಸ್ಪತ್ರೆಯ ಕಟ್ಟಡವನ್ನು ಮಾತ್ರ ದೊಡ್ಡದಾಗಿ ಕಟ್ಟಿದ್ದಾರೆ, ಆದರೆ ಅಲ್ಲಿ ಸೂಕ್ತ ರೀತಿಯಲ್ಲಿ ರೋಗಿಗಳನ್ನು ನೋಡಿಕೊಳ್ಳುವುದಿಲ್ಲ. ಆಂಬುಲೆನ್ಸ್‌ನಲ್ಲಿ ಅಳವಡಿಸಿದ್ದ ಸಿಲಿಂಡರ್ ಕೂಡ ಖಾಲಿಯಾಗಿತ್ತು. ಮೃತ ದೇಹವನ್ನು ಕೊಂಡೊಯ್ಯಲೂ ಸೂಕ್ತರೀತಿಯ ವ್ಯವಸ್ಥೆ ಇಲ್ಲ. ವೈದ್ಯರು ಹಾಗೂ ಇಲ್ಲಿನ ಸಿಬ್ಬಂದಿಗಳ ನಿರ್ಲಕ್ಷ್ಯವೇ ನನ್ನ ಅಣ್ಣನ ಸಾವಿಗೆ ಕಾರಣವಾಯಿತು ಎಂದು ಮರಿಸ್ವಾಮಿ ವಿಜಯವಾಣಿ ಜತೆ ಮಾತನಾಡಿ ಅಳಲು ತೋಡಿಕೊಂಡರು.
ಈ ವೇಳೆ ಗ್ರಾಮದ ಮಾದಪ್ಪ, ಸಿದ್ದೇಶ್ ಹಾಗೂ ಗ್ರಾಮಸ್ಥರು ಹಾಜರಿದ್ದರು.
ರೋಗಿಗೆ ಉಸಿರಾಟದ ತೊಂದರೆ ಇತ್ತು. ವೆಂಟಿಲೇಟರ್ ಇರುವ 108 ಆಂಬುಲೆನ್ಸ್ ಮೂಲಕ ಮೈಸೂರಿಗೆ ಕರೆದುಕೊಂಡು ಹೋಗುವಂತೆ ಸೂಚಿಸಲಾಗಿತ್ತು. ಅದು ಬರುವುದು ತಡವಾದ ಕಾರಣಕ್ಕೆ ಆರೋಪ ಮಾಡಲಾಗುತ್ತಿದೆ.
ಡಾ.ಕೃಷ್ಣಪ್ರಸಾದ್, ಜಿಲ್ಲಾ ಶಸಚಿಕಿತ್ಸಾಧಿಕಾರಿ, ಸಿಮ್ಸ್ ಆಸ್ಪತ್ರೆ, ಚಾಮರಾಜನಗರ