

ಚಾಮರಾಜನಗರ : ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಒಕ್ಕೂಟಗಳ ಅಧ್ಯಕ್ಷ ಸಿ.ಕೆ.ಮಂಜುನಾಥ್‌ಗೆ ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ವಿಚಾರದಲ್ಲಿ ಸೌಹಾರ್ದ ಸಭೆ ಕರೆಯುವ ನೈತಿಕತೆ ಇಲ್ಲ ಎಂದು ಆಸ್ತಿ ಸಂರಕ್ಷಣಾ ಸಮಿತಿ ಸದಸ್ಯ ಅಯ್ಯನಪುರ ಶಿವಕುಮಾರ್ ಕಿಡಿಕಾರಿದರು.
ತಾಲೂಕು ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ವಿವಾದದ ಬಗ್ಗೆ ಸಮುದಾಯದ ಎಲ್ಲರಿಗೂ ಮಾಹಿತಿ ತಿಳಿದಿದೆ. ಅದಾಗ್ಯೂ ಸಂಘದ ಆಸ್ತಿ ಪರಭಾರೆ ವಿಚಾರದಲ್ಲಿ ಅಧ್ಯಕ್ಷರಿಗೆ ಸಂಬಂಧವಿಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದ ಮಂಜುನಾಥ್ ಅವರಿಗೆ ಸೌಹಾರ್ದ ಸಭೆ ಕರೆಯುವ ನೈತಿಕತೆ ಇಲ್ಲದಂತಾಗಿದೆ. ಜು.6 ರಂದು ಕರೆದಿರುವ ಸಭೆಯ ಮೂಲಕ ಸಮುದಾಯದ ಬಂಧುಗಳನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದು ಸಂಪೂರ್ಣ ಪ್ರಕರಣವನ್ನು ತಿರುಚುವ ಕೆಲಸವಾಗಿದೆ. ಪ್ರಕರಣ ನ್ಯಾಯಾಲಯದಲ್ಲಿ ಇರುವಾಗ ಸೌಹಾರ್ದ ಸಭೆ ಕರೆಯುವ ಮೂಲಕ ಸಮಾಜದಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಮಂಜುನಾಥ್ ನೇತೃತ್ವದಲ್ಲಿ ಕರೆದಿರುವ ಸೌಹಾರ್ದ ಸಭೆಗೆ ತಾಲೂಕು ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಅಧ್ಯಕ್ಷರು ಹಾಗೂ ಸಂಘದ ಪದಾಧಿಕಾರಿಗಳು ಬರುವುದಿಲ್ಲ. ಹಾಗಾದರೆ ಅಲ್ಲಿ ಲೆಕ್ಕಕೊಡುವವರು ಯಾರು? ಯಾರ ಬಳಿ ಸಂಧಾನ ಸಭೆ ಮಾಡುತ್ತಾರೆ. ಇದು ಗಲಾಟೆ ಎಬ್ಬಿಸುವ ಹುನ್ನಾರವಾಗಿದೆ. ಈ ನಿಟ್ಟಿನಲ್ಲಿ ಆಸ್ತಿ ಸಂರಕ್ಷಣಾ ಸಮಿತಿ ಸದಸ್ಯರು ಈ ಸಭೆಗೆ ಭಾಗವಹಿಸುವುದಿಲ್ಲ. ತಾಲೂಕಿನ ಕಟ್ಟೆ-ಗಡಿ ಯಜಮಾನರು, ದಲಿತ ಸಂಘಟನೆಗಳ ಮುಖಂಡರು ಹಾಗೂ ಸಮಾಜದ ಬಂಧುಗಳು ಈ ಅನಧಿಕೃತ ಸಭೆಯಲ್ಲಿ ಭಾಗವಹಿಸಬಾರದು ಎಂದು ಮನವಿ ಮಾಡಿದರು. ಸಿದ್ದಯ್ಯನಪು ಗ್ರಾಮ ಮುಖಂಡ ಗೋವಿಂದರಾಜು, ತಾಪಂ ಮಾಜಿ ಅಧ್ಯಕ್ಷ ಆರ್.ಮಹದೇವ್, ಸದಸ್ಯ ನಲ್ಲೂರು ಸೋಮೇಶ್ವರ್, ಮುಖಂಡರಾದ ಹೆಬ್ಬಸೂರು ರಂಗಸ್ವಾಮಿ, ಚೆನ್ನಂಜಯ್ಯ, ನಾಗಯ್ಯ, ಸೋಮಣ್ಣ ಹಾಜರಿದ್ದರು.