

ಹನೂರು: ತಾಲೂಕಿನ ಬಿದರಹಳ್ಳಿ ಗ್ರಾಮದಲ್ಲಿ ಅನ್ಯ ಕೋಮಿನವರ ಮನೆಗೆ ಕೋಳಿ ನುಗ್ಗಿದ ವಿಚಾರವಾಗಿ ನಡೆದ ಗಲಾಟೆಯಲ್ಲಿ ಗಾಯಗೊಂಡಿದ್ದ ಭೋವಿ ಜನಾಂಗದ ನಲ್ಲಮ್ಮ ಅವರ ಮನೆಗೆ ಬುಧವಾರ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೇಶವಮೂರ್ತಿ ಭೇಟಿ ನೀಡಿ ಮಾಹಿತಿ ಪಡೆದರು.
ಜೂ.30 ರಂದು ನಲ್ಲಮ್ಮ ಅವರಿಗೆ ಸೇರಿದ ಕೋಳಿ ಬೇಡಗಂಪಣ ಸಮುದಾಯದ ಮುರುಗ ಅವರ ಮನೆಗೆ ನುಗ್ಗಿತ್ತು. ಈ ವಿಚಾರವಾಗಿ ಅದೇ ದಿನ ರಾತ್ರಿ 7.30ರಲ್ಲಿ ಮುರುಗ ತನ್ನ ಪುತ್ರ ಸ್ವಾಮಿ, ಪತ್ನಿ ವಸಂತಿ ಹಾಗೂ ಎಸ್ಸಿ ಸಮುದಾಯದ ಚಿನ್ನತಂಬಿ ಜತೆಗೂಡಿ ನಲ್ಲಮ್ಮನ ಮನೆಗೆ ತೆರಳಿ ಗಲಾಟೆ, ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದರು. ಇದರಿಂದ ಗಾಯಗೊಂಡ ನಲ್ಲಮ್ಮ ಅವರು ರಾಮಾಪುರ ಪೊಲೀಸರಿಗೆ ದೂರು ನೀಡಿ ಕಾಮಗೆರೆ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದು ಮನೆಗೆ ಆಗಮಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ನಾಲ್ವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಬಳಿಕ 2 ದಿನದ ಹಿಂದೆ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ಈ ನಡುವೆ ಕೇಶವಮೂರ್ತಿ ನಲ್ಲಮ್ಮ ಅವರ ಮನೆಗೆ ಭೇಟಿ ನೀಡಿ ನಡೆದ ಘಟನೆ ಬಗ್ಗೆ ಮಾಹಿತಿ ಪಡೆದರಲ್ಲದೆ ಆರೋಗ್ಯ ವಿಚಾರಿಸಿದರು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಮೈಸೂರು ಆಸ್ಪತ್ರೆಗೆ ದಾಖಲಿಸುವುದಾಗಿ ನಲ್ಲಮ್ಮರಿಗೆ ಭರವಸೆ ನೀಡಿದರಲ್ಲದೆ 50 ಸಾವಿರ ರೂ. ಪರಿಹಾರ ಮಂಜೂರು ಮಾಡುವಂತೆ ಹಿರಿಯ ಅಧಿಕಾರಿಗಳಿಗೆ ಶಿಫಾರಸು ಮಾಡಲಾಗಿದ್ದು, ಇನ್ನೆರಡು ದಿನದೊಳಗೆ ಖಾತೆಗೆ ಹಣ ಜಮೆಯಾಗಲಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ಹೇಳಿದರು.