ನಗರವಾಸಿಗಳಿಗೆ ರೋಗ ಭೀತಿ

04rajesh1
Published on

ಚಾಮರಾಜನಗರ: ರಾಜ್ಯದೆಲ್ಲೆಡೆ ಡೆಂಘೆ ಉಲ್ಬಣಿಸುತ್ತಿರುವ ಬೆನ್ನಲ್ಲೇ ಗಡಿಜಿಲ್ಲೆ ಚಾಮರಾಜನಗರದ ಗ್ರಾಮೀಣ ಪ್ರದೇಶಗಳಿಗಿಂತ ನಗರ ವಾಸಿಗಳಲ್ಲಿ ಡೆಂಘೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕಚೇರಿ ನೀಡಿರುವ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ ಒಟ್ಟು 834 ಜನರಲ್ಲಿ ಡೆಂಘೆ ಶಂಕೆ ವ್ಯಕ್ತವಾಗಿದೆ. ಇವರಲ್ಲಿ ಚಾಮರಾಜನಗರ ತಾಲೂಕಿನ 422, ಗುಂಡ್ಲುಪೇಟೆ ತಾಲೂಕಿನ 141, ಹನೂರು ತಾಲೂಕಿನ 51, ಕೊಳ್ಳೇಗಾಲ ತಾಲೂಕಿನ 19, ಯಳಂದೂರು ತಾಲೂಕಿನ 11 ಜನರಿಗೆ ರಕ್ತ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ ಚಾಮರಾಜನಗರ-32, ಗುಂಡ್ಲುಪೇಟೆ-13, ಹನೂರು-6, ಕೊಳ್ಳೇಗಾಲ-2, ಯಳಂದೂರು-1 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಒಟ್ಟು 54 ಸೋಂಕಿತರಲ್ಲಿ ಹೆಚ್ಚಿನವರು ನಗರ ಪ್ರದೇಶದವರೇ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ನಗರ ಪ್ರದೇಶದಲ್ಲೇ ಯಾಕೆ ಕಾಟ?: ಸೊಳ್ಳೆಗಳ ಉತ್ಪತ್ತಿ ತಾಣವಾಗಿರುವ ನಗರ ಪ್ರದೇಶ ಡೆಂಘೆ ಜ್ವರಕ್ಕೆ ಆಹ್ವಾನ ನೀಡುತ್ತಿದೆ. ಈಡೀಸ್ ಎಂಬ ಸೊಳ್ಳೆ ಕಚ್ಚಿದರೆ ರೋಗ ಒಬ್ಬರಿಂದೊಬ್ಬರಿಗೆ ಹರಡುತ್ತದೆ. ಈ ಸೊಳ್ಳೆ ತೆರೆದ ನೀರಿನ ತೊಟ್ಟಿ, ಬಯಲಿನಲ್ಲಿ ಬಿಸಾಡಿದ ಟೈಯರ್, ಮನೆಯ ಸುತ್ತಮುತ್ತಲಿನ ತ್ಯಾಜ್ಯದಲ್ಲಿ ನಿಲ್ಲುವ ನೀರಿನಲ್ಲಿ ಉತ್ಪತ್ತಿಯಾಗುತ್ತದೆ. ಗ್ರಾಮೀಣ ಪ್ರದೇಶಗಳಿಗಿಂತಲೂ ನಗರ ಪ್ರದೇಶದಲ್ಲಿ ಸೊಳ್ಳೆ ಉತ್ಪತ್ತಿಯಾಗುವುದರಿಂದ ಡೆಂಘೆ ಹೆಚ್ಚು ಕಾಟ ಕೊಡುತ್ತದೆ.
ಈಡೀಸ್ ಸೊಳ್ಳೆ ಕಚ್ಚಿದರೆ ಜ್ವರ, ಕಣ್ಣಿನ ಹಿಂಭಾಗದಲ್ಲಿ ನೋವು, ಸ್ನಾಯು ಮತ್ತು ಕೀಲುಗಳಲ್ಲಿ ನೋವು, ಕೆಲವರಲ್ಲಿ ಬಾಯಿ, ಮೂಗು, ಒಸಡುಗಳಲ್ಲಿ ರಕ್ತಸ್ರಾವ ಗುರುತು, ಹೊಟ್ಟೆ ನೋವು ಮುಂತಾದ ಲಕ್ಷಣಗಳು ಕಂಡುಬರುತ್ತದೆ. ಈ ಜ್ವರಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇರುವುದಿಲ್ಲ.
ಅನೈರ್ಮಲ್ಯವಿದ್ರೆ ಹಳ್ಳಿಗೂ ಎಂಟ್ರಿ: ಡೆಂಘೆ ಕೇವಲ ನಗರ ಪ್ರದೇಶಕ್ಕೆ ಸೀಮಿತವಾದ ರೋಗವಲ್ಲ. ಅನೈರ್ಮಲ್ಯವಿದ್ದರೆ ಹಳ್ಳಿಗಳಿಗೂ ವ್ಯಾಪಿಸಿ ಬಿಡುತ್ತದೆ. ಪಟ್ಟಣಕ್ಕೆ ಹೋಲಿಸಿದರೆ ಹಳ್ಳಿ ಜನರು ಶುದ್ಧ ಮತ್ತು ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡುತ್ತಾರೆ. ರಸ್ತೆ ಬದಿ ಚೆಲ್ಲಿರುವ ಕಸ, ಚರಂಡಿಯಲ್ಲಿ ಗಬ್ಬು ನಾರುತ್ತಿರುವ ಕೊಳಚೆ ನೀರನ್ನು ಸಕಾಲಕ್ಕೆ ಸ್ವಚ್ಛತೆ ಮಾಡುವುದಿಲ್ಲ. ಆದರೆ ಜನರು ತಮ್ಮ ಮನೆಗಳ ಆವರಣದಲ್ಲಿ ಸ್ವಚ್ಛತೆಯನ್ನು ಕಾಪಾಡುತ್ತಿದ್ದಾರೆ. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಡೆಂಘೆ ಬಾಧೆ ಕಡಿಮೆ ಇದೆ.

ಕಳೆದ ವರ್ಷ 31 ಜನರಿಗೆ ಡೆಂಘೆ
ಈ ವರ್ಷ ಜಿಲ್ಲೆಯಲ್ಲಿ 54 ಡೆಂಘೆ ಪ್ರಕರಣಗಳು ವರದಿಯಾಗಿವೆ. ಪಾಸಿಟಿವಿಟಿ ರೇಟ್ ಶೇ.8.38ರಷ್ಟಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 328 ಜನರಿಗೆ ರಕ್ತ ಪರೀಕ್ಷೆ ಮಾಡಲಾಗಿತ್ತು. ಇವರಲ್ಲಿ 31 ಜನರಿಗೆ ಪಾಸಿಟಿವ್ ಬಂದಿತ್ತು. ಪ್ರಸ್ತುತ ಜಿಲ್ಲೆಯಲ್ಲಿ ಡೆಂಘೆ ಪ್ರಕರಣಗಳು ನೂರರ ಗಡಿ ದಾಟಿಲ್ಲ. ಆರೋಗ್ಯ ಇಲಾಖೆ ಲಾರ್ವಾ ಸರ್ವೆ ಮಾಡಿ ಸೊಳ್ಳೆ ಉತ್ಪತ್ತಿ ತಾಣಗಳನ್ನು ಸ್ವಚ್ಛಗೊಳಿಸಲು ಅರಿವು ಮೂಡಿಸುತ್ತಿದೆ. ನಾಗರಿಕರು ಸ್ವಯಂ ಪ್ರೇರಿತರಾಗಿ ಡೆಂಘೆ ತಡೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕಿದೆ. ಇಲ್ಲದಿದ್ದರೆ ಡೆಂಘೆ ವ್ಯಾಪಿಸಲಿದೆ.

ದರ ನಿಗದಿ
ರಾಜ್ಯದಲ್ಲಿ ಡೆಂಘೆ ಪ್ರಕರಣಗಳು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರೋಗಿಗಳಿಗೆ ಆರೋಗ್ಯ ಇಲಾಖೆ ಡೆಂಘೆ ಪರೀಕ್ಷೆಗೆ ದರ ನಿಗದಿ ಮಾಡಿ ಆದೇಶ ಹೊರಡಿಸಿದೆ. ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 2020, ಸೆಕ್ಷನ್ 4(1), 4(2) ಕೆ ಅಡಿಯಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಡೆಂಘೆ ಪರೀಕ್ಷೆ ಮತ್ತು ಚಿಕಿತ್ಸೆ ಉಚಿತವಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಎಲಿಸಾ ಎನ್‌ಎಸ್‌ಐ ಪರೀಕ್ಷೆ ಮತ್ತು ಎಲಿಸಾ 1 ಜಿಎಂ ಪರೀಕ್ಷೆಗೆ 300 ರೂ. ಮತ್ತು ರ‌್ಯಾಪಿಡ್ ಪರೀಕ್ಷೆಗೆ 250 ರೂ. ನಿಗದಿ ಮಾಡಿದೆ. ಎಲ್ಲ ಖಾಸಗಿ ಆಸ್ಪತ್ರೆಗಳು, ಲ್ಯಾಬೋರೇಟರಿಗಳು ಇದೇ ದರವನ್ನು ನಿಗದಿ ಮಾಡಬೇಕಾಗಿದೆ.

ಆಶಾ ಮತ್ತು ಆರೋಗ್ಯ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಲಾರ್ವಾ ಸರ್ವೆ, ಜ್ವರ ಸಮೀಕ್ಷೆ ಮಾಡುತ್ತಿದ್ದಾರೆ. ಡೆಂಘೆ ಶಂಕೆ ವ್ಯಕ್ತವಾದರೆ ರಕ್ತ ಪರೀಕ್ಷೆ ಮಾಡುತ್ತಿದ್ದೇವೆ. ಡೆಂಘೆ ದೃಢಪಟ್ಟ ಮನೆಯ ಸುತ್ತಮುತ್ತ ಲಾರ್ವಾ ಸಮೀಕ್ಷೆ ಮಾಡಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತಿದ್ದೇವೆ.ಎಂ.ಎಸ್.ಅಶೋಕ್‌ಕುಮಾರ್, ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net