

ಚಾಮರಾಜನಗರ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಭವಿಸುವ ಜನನ-ಮರಣ ಘಟನೆಗಳನ್ನು ಆಯಾ ಗ್ರಾಮ ಪಂಚಾಯಿತಿಯಲ್ಲಿಯೇ ನೋಂದಣಿ ಮಾಡಿ ಜನನ ಮರಣ ಪ್ರಮಾಣ ಪತ್ರಗಳನ್ನು ನೀಡುವ ಕಾರ್ಯ ಜು.1 ರಿಂದ ಆರಂಭವಾಗಲಿದೆ. ಜನನ-ಮರಣ ನೋಂದಣಿ ಅಧಿನಿಯಮ 1969ರ ಪ್ರಕರಣ 7(5) ಅನ್ವಯ ಜನನ ಮರಣ ಅಥವಾ ಘಟನೆಗಳು ನಡೆದ 30 ದಿನಗಳೊಳಗೆ ಆಯಾ ಗ್ರಾ.ಪಂ. ನೋಂದಣಿ ಮಾಡಲು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳನ್ನು ಉಪ ನೋಂದಣಾಧಿಕಾರಿಗಳನ್ನಾಗಿ ಮಾಡಲಾಗಿದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನನ ಅಥವಾ ಮರಣದ 21 ದಿನಗಳೊಳಗೆ ನೋಂದಣಿ ಮಾಡಿ ಉಚಿತವಾಗಿ ಒಂದು ಪ್ರಮಾಣ ಪತ್ರವನ್ನು ನೀಡಲಾಗುವುದು. ಜನನ ಮರಣ ನೋಂದಣಿ ಸಂಬಂಧ ಯಾವುದಾದರೂ ಸಂದೇಶ, ಸ್ಪಷ್ಟೀಕರಣ ಅವಶ್ಯಕತೆಯಿದ್ದಲ್ಲಿ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿ ಕೊಠಡಿ ಸಂಖ್ಯೆ 201 ಅಥವಾ ಮೊ.ಸಂ 9482129289 ಮತ್ತು ಜನನ ಮರಣ ನೋಂದಣಿ ಅಧಿಕಾರಿಗಳ ಕಚೇರಿ ಸಂಪರ್ಕಿಸಬಹುದೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.