ಪ್ರತಿಕೂಲ ವಾತಾವರಣದಲ್ಲಿ ಕಾಫಿ

29rajesh2
Published on

ಚಾಮರಾಜನಗರ; ಪ್ರತಿಕೂಲ ವಾತಾವರಣ ಅದರಲ್ಲೂ ಸಾವಯವ ಕೃಷಿ ಪದ್ಧತಿಯಡಿ ಕಾಫಿ ಬೆಳೆಯುವ ಮೂಲಕ ಇಲ್ಲೊಬ್ಬ ಕೃಷಿಕರೊಬ್ಬರು ಯಶಸ್ಸು ಸಾಧಿಸಿದ್ದು, ಖುಷಿ ಜೀವನ ಕಂಡುಕೊಂಡಿದ್ದಾರೆ.

ತಾಲೂಕಿನ ಹೆಬ್ಬಸೂರು ಗ್ರಾಮದ ನಿವಾಸಿ ದಿ.ಎಚ್.ಸಿ.ಸುಬ್ರಹ್ಮಣ್ಯಂ ಮತ್ತು ದಿ.ನಾಗರತ್ನಮ್ಮ ದಂಪತಿ ಪುತ್ರ ಶ್ರೀಧರ್‌ಪ್ರಸಾದ್ ಅವರು ಕೃಷಿ ಬದುಕನ್ನೇ ಪ್ರಧಾನವಾಗಿಸಿಕೊಂಡು ಸಂತೃಪ್ತಿ ಜೀವನ ಸಾಗಿಸುತ್ತಿದ್ದಾರೆ. ಶ್ರೀಧರ್ ಪ್ರಸಾದ್ ಅವರು ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದಿದ್ದು, ಆ ಅವಧಿಯಲ್ಲಿ ಹಲವಾರು ಉದ್ಯೋಗಗಳಿಗೆ ಹೋಗುವ ಅವಕಾಶವಿದ್ದರೂ ಜೀವನದ ನಿರ್ವಹಣೆಗೆ ವ್ಯವಸಾಯವನ್ನೇ ಆಯ್ಕೆ ಮಾಡಿಕೊಂಡರು.

ಗ್ರಾಮದಲ್ಲಿರುವ ಸ್ವಂತ 6 ಎಕರೆ ಜಮೀನು ಹಾಗೂ 1 ಎಕರೆ ತೆಂಗಿನ ತೋಟದಲ್ಲಿ 5 ವರ್ಷಗಳಿಂದ ಸಾವಯವ ಪದ್ಧತಿಯಡಿ ವ್ಯವಸಾಯ ಮಾಡುತ್ತಿದ್ದಾರೆ. ಅಂದಿನಿಂದಲೂ ಯಾವುದೇ ರಾಸಾಯನಿಕಗಳನ್ನು ಬಳಕೆ ಮಾಡದೆ ಜೀವಾಮೃತವನ್ನೇ ಆಧಾರವಾಗಿ ಇಟ್ಟುಕೊಂಡು ತೆಂಗು, ಅಡಕೆ, ಬಾಳೆ, ಕಾಳುಮೆಣಸು, ಕಾಫಿ, ಏಲಕ್ಕಿ, ಜಾಯ್ ಕಾಯಿ ಸೇರಿದಂತೆ ಇತರ ಬೆಳೆಗಳನ್ನು ಸಮೃದ್ಧಿಯಾಗಿ ಬೆಳೆಯುತ್ತಿದ್ದಾರೆ.

ಪ್ರತಿಕೂಲ ವಾತಾವರಣದಲ್ಲಿ ಕಾಫಿಯನ್ನು ಬೆಳೆದಿರುವ ಶ್ರೀಧರ್‌ಪ್ರಸಾದ್ ಅವರು ಅಡಕೆಯಲ್ಲೂ ಬಹಳಷ್ಟು ಲಾಭ ಕಾಣುತ್ತಿದ್ದಾರೆ. ತಮ್ಮ ತೋಟದಲ್ಲಿ ದೊರೆಯುವ ಯಾವುದೇ ವಸ್ತುಗಳನ್ನು ವ್ಯರ್ಥ ಮಾಡದೆ ಭೂಮಿಯಲ್ಲಿ ಎರೆಹುಳು ಉತ್ಪತ್ತಿ ಮಾಡುವ ಮಾರ್ಗ ಕಂಡುಕೊಂಡಿದ್ದಾರೆ. ಬೆಳೆಗಳಿಗೆ ಬೆಲೆ ಸಿಕ್ಕರೆ ವರ್ಷಕ್ಕೆ 15ರಿಂದ 20 ಲಕ್ಷ ರೂ. ಲಾಭ ಪಡೆಯಬಹುದು ಎಂದು ಹೇಳುವ ಶ್ರೀಧರ್, ಮುಂದಿನ ದಿನಗಳಲ್ಲಿ ಜೀವಾಮೃತ ಪ್ಲಾಂಟ್ ನಿರ್ಮಾಣ ಹಾಗೂ ಇತರ ಯೋಜನೆ ಹಾಕಿಕೊಂಡಿದ್ದಾರೆ.

ನಿರಂತರ ಜೀವಾಮೃತ ಬಳಕೆ
ಸುಮಾರು 10 ಕೆಜಿಯಷ್ಟು ಸಗಣಿ, ಗಂಜಲ, 4 ಕೆಜಿಯಷ್ಟು ದ್ವಿದಳ ಧಾನ್ಯದ ಹಿಟ್ಟು, ಬೆಲ್ಲವನ್ನು ಮಿಶ್ರಣ ಮಾಡಿ ಹಲವು ದಿನಗಳವರೆಗೆ ಕೊಳೆಯಲು ಬಿಡುತ್ತಾರೆ. ಬಳಿಕ ಕೊಳೆತ ಜೀವಾಮೃತವನ್ನು 5 ಲೀ. ನೀರಿಗೆ ಮಿಶ್ರಣ ಮಾಡಿ ಬೆಳೆಗಳಿಗೆ ನಿರಂತರವಾಗಿ ಕೊಡುತ್ತಿದ್ದಾರೆ. ಬೇವಿನ ಎಣ್ಣೆ, ಬೆಳ್ಳುಳ್ಳಿಯನ್ನು ಔಷಧ ರೂಪದಲ್ಲಿ ನೀಡುತ್ತಾರೆ. ಗಿಡ ಸಮೃದ್ಧಿಯಿಂದ ಬೆಳೆದರೆ ಅದಕ್ಕೆ ಯಾವುದೇ ರೋಗ ಬರುವುದಿಲ್ಲ ಎಂಬುದನ್ನು ಅರಿತಿರುವ ಶ್ರೀಧರ್, ಸತತ 5 ವರ್ಷಗಳಿಂದಲೂ ರಾಸಾಯನಿಕ ಗೊಬ್ಬರಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಮೂರು ಮಲೆನಾಡು ಗಿಡ್ಡ ಹಸುಗಳನ್ನು ಸಾಕಿರುವ ಇವರು, ಜೀವಾಮೃತಕ್ಕೆ ಅಗತ್ಯವಾದ ಗೊಬ್ಬರ, ಗಂಜಲ ಇದರಿಂದಲೇ ದೊರೆಯುತ್ತಿದೆ. ಜತೆಗೆ ಉತ್ಕೃಷ್ಟವಾದ ಹಾಲು ಮನೆ ಬಳಕೆಗೆ ಲಭ್ಯವಾಗುತ್ತಿದೆ.

ಮಾರ್ಕೆಟಿಂಗ್ ಮಾಡುವುದು ಸುಲಭ
ಬಿಳಿಗಿರಿರಂಗನಬೆಟ್ಟ ಸೇರಿದಂತೆ ಕಾಡಂಚಿನ ಪ್ರದೇಶ ಹೊರತುಪಡಿಸಿ ತಾಲೂಕಿನಲ್ಲಿ ಎಲ್ಲೂ ಕಾಫಿ ಬೆಳೆಯಲು ಸಾಧ್ಯವಿಲ್ಲ. ಆದರೆ ಪ್ರತಿಕೂಲ ವಾತಾವರಣದಲ್ಲೂ 2 ವರ್ಷಗಳ ಹಿಂದೆಯೇ ಸುಮಾರು 4 ಸಾವಿರ ಅರೇಬಿಕಾ ಕಾಫಿ ಗಿಡಗಳನ್ನು ಹಾಕಿ ಯಶಸ್ವಿಯಾಗಿದ್ದಾರೆ. ಈಗಾಗಲೇ ಗಿಡಗಳು 3-4 ಅಡಿಯಷ್ಟು ಎತ್ತರವಾಗಿ ಬೆಳೆದಿದ್ದು, ಹೂವಿನೊಂದಿಗೆ ಕಾಯಿಯನ್ನೂ ಬಿಡುತ್ತಿವೆ. ಈ ಬೆಳೆ ಸುಮಾರು 30 ವರ್ಷಗಳವರೆಗೂ ಇದ್ದು, ಮಾರ್ಕೆಟಿಂಗ್ ಮಾಡುವುದು ಕೂಡ ಸುಲಭ. ಅಲ್ಲದೆ ಕಾಫಿ ಎಲೆಯಿಂದ ಮಣ್ಣಿನ ಫಲವತ್ತತೆ ವೃದ್ಧಿಸುವ ಪ್ರಕ್ರಿಯೆಯನ್ನು ಶ್ರೀಧರ್ ಕಂಡುಕೊಂಡಿದ್ದಾರೆ. ಇದರಿಂದಾಗಿ ಎಷ್ಟು ಮಳೆಯಾದರೂ ನೀರು ನಿಲ್ಲದೆ ತೋಟದಲ್ಲೇ ಇಂಗುವುದಕ್ಕೆ ಇದು ಸಹಕಾರಿಯಾಗಿದೆ. ಏಲಕ್ಕಿ ಮತ್ತು 100 ಜಾಯ್‌ಕಾಯಿ ಗಿಡಗಳು ಸಮೃದ್ಧವಾಗಿ ಬೆಳೆದು ನಿಂತಿದೆ.

ಅಡಕೆಯಲ್ಲೂ ಯಶಸ್ಸು
ಸಾವಯವ ಪದ್ಧತಿಯಡಿ ಅಡಕೆ ಬೆಳೆದಿರುವ ಕೃಷಿಕ ಶ್ರೀಧರ್ ಪ್ರಸಾದ್, ಅಡಕೆ ಬೆಳೆಯಲ್ಲೂ ಯಶಸ್ಸು ಸಾಧಿಸಿದ್ದಾರೆ. ಯಾವುದೇ ರಾಸಾಯನಿಕ ಬಳಕೆ ಮಾಡದೆ ಗುಣಮಟ್ಟದ ಅಡಕೆ ಬೆಳೆದಿದ್ದಾರೆ. ಈಗಾಗಲೇ ಅಡಕೆ ಲ ಬಿಡುತ್ತಿದ್ದು, ನಿರಂತರ ಜೀವಾಮೃತ ನೀಡುವುದರಿಂದ 4-6 ತಾರುಗಳನ್ನು ಬಿಡುತ್ತಿದೆ. ಉತ್ತಮ ಬೆಲೆ ಇದ್ದರೆ ವರ್ಷದಲ್ಲಿ 6-7 ಲಕ್ಷ ರೂ. ಅಡಕೆಯಿಂದಲೇ ಸಂಪಾದನೆ ಮಾಡಬಹುದು ಎಂಬುದು ಇವರ ಅಂದಾಜು.
ಜಮೀನಿನಲ್ಲಿ ಎರೆಹುಳು ಉತ್ಪತ್ತಿಯಾಗಬೇಕು. ಯಾವುದೇ ಕಾರಣಕ್ಕೂ ಕಳೆನಾಶಕ ಬಳಕೆ ಮಾಡಬಾರದು ಎಂಬ ಧ್ಯೇಯವನ್ನು ಅಳವಡಿಸಿಕೊಂಡಿರುವ ಶ್ರೀಧರ್, ಕಳೆ ನಾಶಕ ಬಳಕೆಯಿಂದ ಗಿಡ ಹಾಳಾಗುವುದರ ಜತೆಗೆ ಮನುಷ್ಯನ ಆರೋಗ್ಯವೂ ಕೆಡುತ್ತದೆ ಎನ್ನುತ್ತಾರೆ. ಈ ನಿಟ್ಟಿನಲ್ಲಿ ಅವರು ಸಂಪೂರ್ಣವಾಗಿ ಸಾವಯವ ಕೃಷಿಯನ್ನೇ ಅವಲಂಬಿಸಿದ್ದಾರೆ. ಇತರ ರೈತರಿಗೂ ಸಾವಯವ ಕೃಷಿಗೆ ತೊಡಗಿಸಿಕೊಳ್ಳುವಂತೆ ಸಲಹೆಯನ್ನೂ ನೀಡುತ್ತಾರೆ.

ಪ್ರತಿ ರೈತ ಸಾವಯವ ಕೃಷಿಯತ್ತ ಮುಖ ಮಾಡಬೇಕು. ಜೀವಾಮೃತ ಬಳಕೆಯಿಂದ ಸಮೃದ್ಧವಾದ ಬೆಳೆ ಕಾಣಬಹುದಾಗಿದೆ. ಕೃಷಿಯಲ್ಲಿ ನಿರಂತರವಾಗಿ ಸಾವಯವ ಪದ್ಧತಿ ಅಳವಡಿಸಿಕೊಂಡರೆ ಖಂಡಿತವಾಗಿಯೂ ಲಾಭ ಕಾಣಬಹುದಾಗಿದೆ.ಶ್ರೀಧರ್ ಪ್ರಸಾದ್ ಸಾವಯವ ಕೃಷಿಕ, ಹೆಬ್ಬಸೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net