

ಚಾಮರಾಜನಗರ : ನೆಟ್‌ಬಾಲ್ ಅಸೋಷಿಯೇಷನ್ ವತಿಯಿಂದ ಜುಲೈ 5 ರಿಂದ 7 ರವರೆಗೆ ಜೂನಿಯರ್ ವಿಭಾಗದ 19 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರ ರಾಜ್ಯ ಮಟ್ಟದ 6ನೇ ನೆಟ್‌ಬಾಲ್ ಪಂದ್ಯಾವಳಿಯನ್ನು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನೆಟ್‌ಬಾಲ್ ಅಸೋಸಿಯೇಷನ್ ಗೌರವಾಧ್ಯಕ್ಷೆ ನರ್ಗೀಸ್ ಬಾನು ತಿಳಿಸಿದರು.
ರಾಜ್ಯ ಅಮೆಚೂರ್ ನೆಟ್‌ಬಾಲ್ ಅಸೋಸಿಯೇಷನ್ ಸಹಯೋಗ, ಚಾಮರಾಜನಗರ ಜಿಲ್ಲಾ ನೆಟ್‌ಬಾಲ್ ಅಸೋಸಿಯೇಷನ್ ನೇತೃತ್ವದಲ್ಲಿ ನಗರದ ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 700ಕ್ಕೂ ಹೆಚ್ಚು ಕ್ರೀಡಾಪಟುಗಳು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ನೆಟ್‌ಬಾಲ್ ಕ್ರೀಡೆಯು ಅಂತರಾಷ್ಟ್ರೀಯ ಕ್ರೀಡೆಯಾಗಿದ್ದು, ಇದರಿಂದ ಜಿಲ್ಲೆಯ ಕ್ರೀಡಾಪಟುಗಳು ನೆಟ್‌ಬಾಲ್ ಕ್ರೀಡೆಯನ್ನು ಹೆಚ್ಚು ಹೆಚ್ಚಾಗಿ ಆಯ್ಕೆ ಮಾಡಿಕೊಂಡು ತಮ್ಮ ಮುಂದಿನ ಕ್ರೀಡಾ ಭವಿಷ್ಯವನ್ನು ರೂಪಿಸಿಕೊಳ್ಳಲು ಪಂದ್ಯಾವಳಿ ಪೂರಕವಾಗಿರುತ್ತದೆ ಎಂದರು.
ಅಸೋಸಿಯೇಷನ್‌ನ ಅಧ್ಯಕ್ಷ ವಿ.ಶ್ರೀನಿವಾಸ ಪ್ರಸಾದ್ ಮಾತನಾಡಿ, ಚಾಮರಾಜನಗರ ಜಿಲ್ಲಾ ನೆಟ್‌ಬಾಲ್ ಅಸೋಸಿಯೇಷನ್ ಸಕ್ರಯವಾಗಿ ಕೆಲಸ ಮಾಡುತ್ತಿದೆ. ನಮ್ಮ ಕ್ರೀಡಾಪಟುಗಳು ಮಧ್ಯ ಪ್ರದೇಶ, ಜಾರ್ಖಾಂಡ್ ಹಾಗೂ ಬೆಂಗಳೂರಿನಲ್ಲಿ ನಡೆದ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡುವ ಮೂಲಕ ಬೆಳ್ಳಿ ಹಾಗೂ ಕಂಚಿನ ಪದಕ ತಂದಿದ್ದಾರೆ. ನಮ್ಮ ಜಿಲ್ಲೆಯ ಎಲ್ಲ ತಾಲೂಕಿನ ಪ್ರತಿಯೊಂದು ಶಾಲೆಗಳಲ್ಲೂ ಕೂಡಾ ಈ ಕ್ರೀಡೆಯನ್ನು ವಿಸ್ತರಣೆ ಮಾಡುವ ಮೂಲಕ ಉತ್ತಮ ಕ್ರೀಡಾಪಟುಗಳನ್ನು ತಯಾರು ಮಾಡುವುದು ನಮ್ಮ ಉದ್ದೇಶವಾಗಿದೆ ಎಂದರು.
ಈ ಬಾರಿ ನಮ್ಮ ಜಿಲ್ಲೆಯಲ್ಲಿಯೇ ರಾಜ್ಯ ಮಟ್ಟದ ಪಂದ್ಯಾವಳಿವನ್ನು ಆಯೋಜಿಸಲಾಗುತ್ತಿದ್ದು, ನಮ್ಮ ಕ್ರೀಡಾಪಟುಗಳು ಇನ್ನೂ ಉತ್ತಮ ಆಟವನ್ನು ಪ್ರದರ್ಶಿಸುವ ಮೂಲಕ ಪ್ರಥಮ ಬಹುಮಾನ ಗೆಲ್ಲುವ ನಿರೀಕ್ಷೆ ಇದೆ. ಈ ಪಂದ್ಯಾವಳಿಗೆ ಆಗಮಿಸುವ ಎಲ್ಲ ಕ್ರೀಡಾಪಟುಗಳಿಗೆ ಊಟ ಹಾಗೂ ಸೂಕ್ತ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದರು. ಗೋಷ್ಠಿಯಲ್ಲಿ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಮಹದೇವಪ್ರಸಾದ್, ಸಂಘಟನಾ ಕಾರ್ಯದರ್ಶಿ ಮಧುಕುಮಾರ್, ಸದಸ್ಯರಾದ ರೂಪಾ ಕಾಶಿ ನಾಗೇಂದ್ರಪ್ರಸಾದ್, ಸಿ.ಎಸ್.ಅಕ್ಷಯ್, ಶ್ರೀಧರ್ ಹಾಜರಿದ್ದರು.