

ಚಾಮರಾಜನಗರ: ರಾಜ್ಯದಲ್ಲಿ ಆಷಾಢ ಮಾಸದಲ್ಲಿ ನಡೆಯುವ ಏಕೈಕ ರಥೋತ್ಸವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಶ್ರೀಚಾಮರಾಜೇಶ್ವರ ರಥೋತ್ಸವ ಜು.20ರಂದು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ತೇರು ಕಟ್ಟುವ ಕೆಲಸ ಆರಂಭಗೊಂಡಿತು.
ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಬೆಳಗ್ಗೆ ಶಾಸಕ ಮತ್ತು ಎಂಎಸ್‌ಐಎಲ್ ಅಧ್ಯಕ್ಷ ಸಿ.ಪುಟ್ಟರಂಗಶೆಟ್ಟಿ ರಥ ಕಟ್ಟುವ ಕಾರ್ಯಕ್ಕೆ ಚಾಲನೆ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ಬಾರಿಯೂ ವಿಜೃಂಭಣೆಯಿಂದ ರಥೋತ್ಸವವನ್ನು ಆಚರಣೆ ಮಾಡೋಣ. ಶ್ರೀಚಾಮರಾಜೇಶ್ವರ ರಥೋತ್ಸವವೆಂದರೆ ಭಕ್ತರಿಗೆ ಅಪಾರ ಭಕ್ತಿ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ರಥ ಎಳೆಯಲಿದ್ದಾರೆ. ತೇರನ್ನು ಅಂದವಾಗಿ ಕಟ್ಟಿ, ದಿವ್ಯ ಕಳೆಯಿಂದ ಕೂಡಿರಲಿ ಎಂದು ಹೇಳಿದರು. ದೇವಾಲಯದ ಅರ್ಚಕರಾದ ದರ್ಶನ್, ರಾಮಕೃಷ್ಣ ಭಾರಧ್ವಜ್, ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್, ಪ್ರಭು, ಮನು, ಸ್ವಾಮಿ, ಅನಿಲ್, ಉಪ್ಪಾರ ಸಮಾಜದ ಮುಖಂಡ ಜಯಕುಮಾರ್ ಇದ್ದರು.