ಮದ್ವೆ ನಿಲ್ಸಿದ ಪುಟ್ಟಗೌರಿಯರು..!

29rajesh1
Published on

ಚಾಮರಾಜನಗರ: ಜಿಲ್ಲೆಯ ನಾಲ್ವರು ಪುಟ್ಟಗೌರಿಯರು ತಮ್ಮ ಬಾಲ್ಯವಿವಾಹವನ್ನು ಪ್ರಾಥಮಿಕ ಹಂತದಲ್ಲಿ ತಾವೇ ತಡೆದಿದ್ದಾರೆ.

ಜಿಲ್ಲಾ ಮಕ್ಕಳ ರಕ್ಷಣಾ ಘಟಕ ನೀಡಿರುವ ಮಾಹಿತಿಯ ಜಾತಕದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಬಾಲ್ಯವಿವಾಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಕ್ಕಳ ಸಹಾಯವಾಣಿ ಸಂಖ್ಯೆ 1098ಗೆ ಒಟ್ಟು 94 ದೂರುಗಳು(2023 ಸೆಪ್ಟೆಂಬರ್‌ನಿಂದ ಈವರೆಗೆ) ಬಂದಿವೆ. ಇವುಗಳಲ್ಲಿ ಬಾಲ್ಯವಿವಾಹದ ವಿರುದ್ಧ ನಿಂತ ನಾಲ್ವರು ಅಪ್ರಾಪ್ತ ಹೆಣ್ಣು ಮಕ್ಕಳ ನೇರ ಪ್ರತಿರೋಧವೂ ದಾಖಲಾಗಿದೆ.

ಈ ಮಕ್ಕಳಿಗೆ ಮನೆಯವರು ಮದುವೆ ಮಾಡಲು ಹುಡುಗನನ್ನು ತೋರಿಸುತ್ತಿದ್ದರು. ನಾಲ್ವರಲ್ಲಿ ಒಂದಿಬ್ಬರಿಗೆ ಎಂಗೇಜ್ಮೆಂಟ್ ಕೂಡ ಫಿಕ್ಸ್ ಆಗುವ ಹಂತದಲ್ಲಿತ್ತು. ಬಾಲ್ಯವಿವಾಹವಾಗಲು ಇಷ್ಟಪಡದ ಹೆಣ್ಮಕ್ಳು ತನ್ನ ಸ್ನೇಹಿತರು ಅಥವಾ ಬೇರೆಯವರ ಮೂಲಕ ಅಧಿಕಾರಿಗಳಿಗೆ ಮಾಹಿತಿ ನೀಡುವ ಬದಲು, ತಾವೇ ನೇರವಾಗಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದಾರೆ. ವಿಷಯ ತಿಳಿಸಿದ ಅಧಿಕಾರಿಗಳು ಇವರ ಪಾಲಕರನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿದ್ದಾರೆ. ಹೆಣ್ಣುಮಕ್ಕಳಿಗೆ 18 ವರ್ಷ ತುಂಬಿದ ಬಳಿಕ ಮದುವೆ ಮಾಡಬೇಕು, ಅಲ್ಲಿಯವರೆಗೂ ಮಾಡಬಾರದು ಎಂದು ಅಧಿಕಾರಿಗಳು ಪಾಲಕರಿಗೆ ಅರಿವು ಮೂಡಿದ್ದಾರೆ. ಈಗಲೂ ಸಹ ಇವರ ಮೇಲೆ ನಿಗಾವಹಿಸಿದ್ದಾರೆ.

ಪ್ರೇಮಿನೂ ಕೊಡ್ತಾನೆ ದೂರು: ನಮ್ಮೂರಲ್ಲಿ 18 ವರ್ಷ ತುಂಬದ ಹುಡುಗಿಗೆ ಬಾಲ್ಯವಿವಾಹ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದನ್ನು ತಡೆಯಿರಿ…ಎಂಬ ಕರೆ ಸಹಾಯವಾಣಿಗೆ ಬಂದಿವೆ. ಮಾತನಾಡಿದ ಹುಡುಗ ಯಾರೆಂದು ತಿಳಿದುಕೊಂಡಾಗ ಆತ ಆ ಹುಡುಗಿಯನ್ನು ಪ್ರೀತಿಸುತ್ತಿರುವವನಾಗಿದ್ದ. ಈ ರೀತಿಯ ಕರೆಗಳೂ ಅಧಿಕಾರಿಗಳಿಗೆ ಬಂದಿವೆ. ಸಾರ್ವಜನಿಕರು, ಪ್ರೇಮಿ, ಸ್ನೇಹಿತ ನೀಡಿದ ಒಟ್ಟು 50 ದೂರುಗಳಿವೆ. ಇವುಗಳಲ್ಲಿ ಪ್ರೇಮಿಯೂ ಕರೆ ಮಾಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ. ಇದಲ್ಲದೇ, ಅಂಗವಾಡಿಗಳಿಂದ 10 ದೂರು, ಆಶಾ ಕಾರ್ಯಕರ್ತೆಯರಿಂದ 4, ಪೊಲೀಸರು 1, ಸಿಡಿಪಿಒ/ಮೇಲ್ವಿಚಾರಕರಿಂದ 6, ಶಿಕ್ಷಕರಿಂದ 1, ಸ್ವಯಂ ಸೇವಾ ಸಂಸ್ಥೆಯಿಂದ 17, ಪಿಎಲ್‌ವಿಯಿಂದ 1 ದೂರುಗಳು ಬಂದಿವೆ.

ಧೈರ್ಯದ ಧ್ಯೋತಕ:
ಮದುವೆಯಾಗಲು ಒತ್ತಾಯಕ್ಕೊಳಪಟ್ಟ ಹೆಣ್ಣುಮಕ್ಕಳು ಸ್ವತಃ ತಾವೇ ದೂರು ನೀಡುವ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. ತಂದೆ-ತಾಯಿ ಮಾತಿಗೆ ಕಟ್ಟುಬಿದ್ದು, ಯಾರಿಗೂ ಹೇಳಿಕೊಳ್ಳಲಾಗದೆ ಅಪ್ರಾಪ್ತ ಹೆಣ್ಮಕ್ಕಳು ಭಯಪಡುವುದುಂಟು. ಅಧಿಕಾರಿಗಳಿಗೆ ತಾವಾಗಿಯೇ ಮಾಹಿತಿ ನೀಡಿದರೆ ಎಲ್ಲಿ ಮನೆಯವರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆಯೋ ಎನ್ನುವ ಆತಂಕವಿರುತ್ತದೆ. ಈ ಕಾರಣಕ್ಕೆ ತಮ್ಮ ಸ್ನೇಹಿತರು, ಸಾರ್ವಜನಿಕರಿಂದ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಕೊಡಿಸುತ್ತಾರೆ. ಆದರೆ ನಾಲ್ವರು ಹೆಣ್ಣುಮಕ್ಕಳು ಇದನ್ನೆಲ್ಲಾ ಲೆಕ್ಕಿಸದೆ ಸ್ವತಃ ತಾವೇ ಅಧಿಕಾರಿಗಳಿಗೆ ಮಾಹಿತಿ ನೀಡಿರುವುದು ಧೈರ್ಯದ ಧ್ಯೋತಕವಾಗಿದೆ.

ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ:
18 ವರ್ಷದೊಳಗಿನ ಹೆಣ್ಣುಮಕ್ಕಳು, 21 ವರ್ಷದೊಳಗಿನ ಗಂಡು ಮಕ್ಕಳಿಗೆ ಮದುವೆ ಮಾಡುವುದು, ಮಾಡಿಸುವುದು, ಇದಕ್ಕೆ ಸಾಕ್ಷಿಯಾಗುವುದು, ಭಾಗವಹಿಸುವುದು ಶಿಕ್ಷಾರ್ಹ ಅಪರಾಧ. 2 ವರ್ಷ ಜೈಲು, 1 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಬಾಲ್ಯ ವಿವಾಹದ ಹೆಣ್ಣು ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದರೆ ಪೋಕ್ಸೋ ಪ್ರಕರಣವೂ ದಾಖಲಾಗುತ್ತದೆ.

ದುಷ್ಪರಿಣಾಮಗಳೇನು?
ಬಾಲ್ಯವಿವಾಹದಿಂದ ದೈಹಿಕ, ಮಾನಸಿಕ ಆರೋಗ್ಯ ಹಾಳು, ಕುಟುಂಬ ನಿರ್ವಹಣೆ ಮಾಡುವ ಸಾಮರ್ಥ್ಯ ಇಲ್ಲದೆ ಇರುವುದು, ಗರ್ಭಧರಿಸಲು ಗರ್ಭಕೋಶ ಪೂರ್ಣ ಬೆಳವಣಿಗೆಯಾಗಿರುವುದಿಲ್ಲ, ಅಪೌಷ್ಠಿಕತೆಯಿಂದ ಮಗು ಜನನ ಸಾಧ್ಯತೆ, ಮಕ್ಕಳೂ ಅಂಗವಿಕರಾಗುವ ಸಂಭವ, ಬೇಗ ವಯಸ್ಸಾದವರಂತೆ ಕಾಣುತ್ತಾರೆ, ಹೆಚ್ಚು ಕೆಲಸ ಮಾಡಲು ಸಾಧ್ಯವಿಲ್ಲ, ಕಷ್ಟಕರ ಹೆರಿಗೆ ಮತ್ತು ಅತಿಯಾದ ರಕ್ತಸ್ರಾವಯಾಗುತ್ತದೆ.

ದೂರು ಕೊಟ್ಟ ವೈದ್ಯರು:
ಮಕ್ಕಳ ಸಹಾಯವಾಣಿಗೆ ಪೋಕ್ಸೋ ಪ್ರಕರಣವೊಂದರ ದೂರನ್ನು ವೈದ್ಯರು ನೀಡಿದ್ದಾರೆ. ಬಾಲ್ಯವಿವಾಹವಲ್ಲದೆ, ಪೋಕ್ಸೋಗೆ ಸಂಬಂಧಿಸಿದ ದೂರುಗಳೂ ಸಹ ಮಕ್ಕಳ ಸಹಾಯವಾಣಿಯಲ್ಲಿ ದಾಖಲಾಗಿವೆ. ಸಾರ್ವಜನಿಕರಿಂದ 2, ಅಂಗವಾಡಿ ಕಡೆಯಿಂದ 2, ಆಶಾ ಕಾರ್ಯಕರ್ತೆಯಿಂದ 1, ಸಿಡಿಪಿಒ/ಮೇಲ್ವಿಚಾರಕರಿಂದ 2 ದೂರಿನ ಕರೆಗಳು ಬಂದಿದ್ದರೆ ವೈದ್ಯರೊಬ್ಬರು ಪೋಕ್ಸೋ ಪ್ರಕರಣದ ದೂರು ನೀಡಿದ್ದಾರೆ. ಆರೋಗ್ಯ ತಪಾಸಣೆ ನಡೆಸುವ ವೇಳೆ ಪತ್ತೆಯಾದ ಮಾಹಿತಿ ಆಧರಿಸಿ ಮಕ್ಕಳ ಸಹಾಯವಾಣಿಗೆ ವೈದ್ಯರು ದೂರು ನೀಡಿದ್ದಾರೆ. ನ್ಯಾಯಾಲಯ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆಯಡಿ(ಪೋಕ್ಸೋ) 20 ವರ್ಷ ಕಠಿಣ ಶಿಕ್ಷೆ ವಿಧಿಸಿದ ಉದಾಹರಣೆಗಳಿವೆ.

ಬಾಲ್ಯ ವಿವಾಹದ ಕುರಿತು ಮಾಹಿತಿ ನೀಡುವ ಯಾರ ಮಾಹಿತಿಯನ್ನೂ ನಾವು ಬಹಿರಂಗ ಪಡಿಸುವುದಿಲ್ಲ. ಗೌಪ್ಯವಾಗಿಯೇ ಇಟ್ಟು ಸಮಸ್ಯೆ ಬಗೆಹರಿಸುತ್ತೇವೆ. ಹೀಗಾಗಿ ಹೆಣ್ಣುಮಕ್ಕಳು ಧೈರ್ಯವಾಗಿ ಮಾಹಿತಿ ನೀಡಬಹುದು. ಇದನ್ನು ತಂದೆ-ತಾಯಿಗೂ ತಿಳಿಸುವುದಿಲ್ಲ. 1098 ಮಕ್ಕಳ ಉಚಿತ ಸಹಾಯವಾಣಿಗೆ ಕರೆ ಮಾಡಿ ಎಂದು ಶಾಲಾ-ಕಾಲೇಜುಗಳಲ್ಲಿ ಅರಿವು ಮೂಡಿಸಲಾಗುತ್ತಿದೆ.ಚೆಲುವರಾಜು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net