ರೈತರ ಚಿನ್ನ ವಾಪಸ್ ಕೊಡಿಸದಿದ್ದರೆ ಆಹೋರಾತ್ರಿ ಧರಣಿ

054
Published on

ಚಾಮರಾಜನಗರ: ತಾಲೂಕಿನ ಮಲೆಯೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಲ್ಲಿ ಗಿರಿವಿ ಇಟ್ಟಿರುವ ರೈತರ ಚಿನ್ನವನ್ನು ವಾಪಸ್‌ಕೊಡಿಸದಿದ್ದರೆ ಜಿಲ್ಲಾಡಳಿತ ಭವನದ ಮುಂಭಾಗ ಅಹೋರಾತ್ರಿ ಧರಣಿ ನಡೆಸುವುದಾಗಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಡಳಿತ ಭವನದ ಮುಖ್ಯದ್ವಾರದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು,ಅಲ್ಲಿಂದ ಮೆರವಣಿಗೆಯಲ್ಲಿ ಸಾಗಿ ಜಿಲ್ಲಾಡಳಿತ ಭವನದ ಕಚೇರಿ ಮುಂಭಾಗಕ್ಕೆ ತೆರಳಿ ಜಿಲ್ಲಾಡಳಿತ ಹಾಗೂ ಸಂಘದ ಆಡಳಿತ ಮಂಡಳಿ ವಿರುದ್ಧ ೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮಲೆಯೂರು ಕೃಷಿಪತ್ತಿನ ಸಹಕಾರ ಸಂಘದಲ್ಲಿ ಮುಗ್ಧ ಹಾಗೂ ಅಮಾಯಕ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುತ್ತೇವೆ ಎಂದು ಚಿನ್ನವನ್ನು ಗಿರಿವಿ ಇಟ್ಟಕೊಂಡು ವಂಚನೆ ಮಾಡಲಾಗಿದೆ. ಚಿನ್ನವನ್ನು ವಾಪಸ್ಸು ಕೊಡಲು 1 ಕೋಟಿ ರೂ. ಗೂ ಅಧಿಕ ಹಣವನ್ನು ಕಟ್ಟಿಸಿಕೊಂಡಿದ್ದಾರೆ. ಆದರೆ ಈವರೆಗೂ ಚಿನ್ನವನ್ನು ಯಾರಿಗೂ ವಾಪಸ್ ನೀಡಿಲ್ಲ. ಈ ಕುರಿತು ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಿ ರೈತರು ಹಾಗೂ ರೈತ ಮಹಿಳೆಯರು ಪ್ರತಿಭಟನೆ ನಡೆಸಿದ್ದರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು.

ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ೋಷಣೆ ಮಾಡಬೇಕು, ವಿಶೇಷ ಪ್ಯಾಕೇಜ್ ಮೂಲಕ ನಷ್ಟ ಪರಿಹಾರವನ್ನು ರೈತರಿಗೆ ವಿತರಿಸಬೇಕು. ಗೋಶಾಲೆಗಳನ್ನ ಪ್ರಾರಂಭಿಸಲು ಕ್ರಮವಹಿಸಬೇಕು. ಕೃಷಿಗೆ ನಿರಂತರವಾಗಿ 10ಗಂಟೆ ವಿದ್ಯುತ್ ನೀಡಬೇಕು. ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆ ಮಾಡುವುದನ್ನು ತಪ್ಪಿಸಬೇಕು. ಪ್ರತಿ ಟನ್ ಕಬ್ಬಿಗೆ 4 ಸಾವಿರ ನಿಗದಿಮಾಡಬೇಕು. ತೆಂಗುಬೆಳೆಗಾರರ ನಷ್ಟಕ್ಕೆ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಕಾಡು ಪ್ರಾಣಿಗಳಿಂದ ನಷ್ಟವಾದ ಬೆಳೆಗೆ ಹೆಚ್ಚಿನ ಪರಿಹಾರ ನೀಡಬೇಕು. ಬೆಳೆವಿಮೆಯ ಬಾಕಿಯನ್ನು ಕೊಡಿಸಬೇಕು. ರೇಷ್ಮೆ ಬೆಲೆ ಕುಸಿತವಾಗಿದ್ದು, ಸರ್ಕಾರ ಪ್ರೋತ್ಸಾಹ ನೀಡಬೇಕು. ಹೆಚ್ಚಿನಬೆಲೆಗೆ ರಸಗೊಬ್ಬರ ಮಾರಾಟ ಮಾಡುವುದರ ವಿರುದ್ಧ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕಬ್ಬುಬೆಳೆಗಾರರ ಸಂಘದ ಜಿಲ್ಲಾ ಉಪಾಧ್ಯಕ್ಷ ಪಟೇಲ್ ಶಿವಮೂರ್ತಿ, ತಾಲೂಕು ಅಧ್ಯಕ್ಷ ಹಾಲಿನ ನಾಗರಾಜ್, ಶಿವಸ್ವಾಮಿ, ವಿ.ಶಿವಪಾದಸ್ವಾಮಿ, ವೀರಭದ್ರಪ್ಪ, ಮಹದೇವಪ್ಪ, ರಾಜಪ್ಪ, ಸಿದ್ದಪ್ಪ, ಗಿರಿಜಾ, ಲಕ್ಷ್ಮಮ್ಮ, ಗೌರಮ್ಮ, ರತ್ನಮ್ಮ, ಮಹದೇವಸ್ವಾಮಿ, ಬಸವಣ್ಣ, ಮಲ್ಲೇಶ್, ಶಿವಪ್ಪ ಹಾಗೂ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net