ಬಸವಣ್ಣನ ಕುರಿತಾದ ಪಠ್ಯದಲ್ಲಿ ಸತ್ಯದ ಅನಾವರಣ

guruswamy
Published on

ಚಾಮರಾಜನಗರ : ರಾಜ್ಯ ಸರ್ಕಾರ 9ನೇ ತರಗತಿಯ ಸಮಾಜವಿಜ್ಞಾನ ಪುಸ್ತಕದಲ್ಲಿ ಸೇರ್ಪಡೆಮಾಡಿರುವ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಎಂಬ ಪಠ್ಯದಲ್ಲಿ ಸತ್ಯವನ್ನು ಅನಾವರಣ ಮಾಡಲಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಕಾಳನಹುಂಡಿ ಗುರುಸ್ವಾಮಿ ಹೇಳಿದರು.

ರಾಜ್ಯ ಸರ್ಕಾರ 2024-25ನೇ ಸಾಲಿನಲ್ಲಿ ಮರು ಮುದ್ರಣ ಮಾಡಿರುವ 9ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಲ್ಲಿ ಸಾಂಸ್ಕೃತಿಕ ನಾಯಕ ಎಂಬ ಲೇಖನ ಅತ್ಯುತ್ತಮವಾಗಿ ಮೂಡಿಬಂದಿದೆ. ಈ ಹಿಂದೆ ಅವೈಜ್ಞಾನಿಕವಾಗಿ ಸೇರಿಸಿದ್ದ ವೀರಶೈವ ಪದವನ್ನು ಕಿತ್ತುಹಾಕಿರುವುದು ಉತ್ತಮ ನಡೆಯಾಗಿದೆ. ಮುಂದಿನ ದಿನಗಳಲ್ಲಿ ಅದನ್ನೇ ಮುಂದುವರಿಸಬೇಕು. ಸರ್ಕಾರದ ವೈಜ್ಞಾನಿಕ ನಡೆಗೆ ಒಕ್ಕೊರಲಿನಿಂದ ಅಭಿನಂದನೆ ಸಲ್ಲಿಸಲಾಗುವುದು ಎಂದು ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ವರೆಗೂ ಸಮಾಜದಲ್ಲಿ ಹೊಂದಾಣಿಕೆ ಮಾಡಿಕೊಂಡ ಧರ್ಮಗಳಿಗೆ ಸಮಸ್ಯೆಗಳು ಎದುರಾಗುವುದಿಲ್ಲ. ಸತ್ಯವನ್ನು ಪ್ರತಿಪಾದಿಸುವ ಧರ್ಮಗಳಲ್ಲಿ ಸಂಘರ್ಷ ಸಾಮಾನ್ಯವಾಗಿದೆ. ವಿಶ್ವವನ್ನೇ ಲಿಂಗದ ರೂಪದಲ್ಲಿ ಭಾವಿಸಿದ್ದ ಬಸವಣ್ಣನವರು, ಹೊಸ ಧರ್ಮವನ್ನು ಹುಟ್ಟುಹಾಕಿದ್ದರು. ಯಾವುದೇ ಕಟ್ಟುಪಾಡುಗಳು ಇಲ್ಲದೇ ಅತ್ಯಂತ ಶ್ರೇಷ್ಠ ಧರ್ಮವನ್ನು ಜಗತ್ತಿಗೆ ನೀಡಿದರು. ಆ ಧರ್ಮವನ್ನು ಅನುಸರಿಸಿಕೊಂಡು ನಡೆದರೇ ಯಾವುದೇ ಸಂಘರ್ಷ ಇರುವುದಿಲ್ಲ ಎಂದರು.
ಈ ಬಾರಿಯ ಪಠ್ಯದಲ್ಲಿ ಸತ್ಯವನ್ನು ಸೇರಿಸಲಾಗಿದೆ, ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರ ಗೌರವವನ್ನು ನೀಡಿದೆ. ತಮ್ಮ ಅನುಕೂಲಕ್ಕಾಗಿ ಸಮಾಜದಲ್ಲಿ ಮೌಢ್ಯವನ್ನು ಬಿತ್ತಿದವರು ಮತ್ತು ಧರ್ಮಗಳನ್ನು ದುರುಪಯೋಗ ಮಾಡಿಕೊಳ್ಳುವವರು ಈ ಬಗ್ಗೆ ಅಪಸ್ವರ ಎತ್ತುತ್ತಾರೆ. ಅದಕ್ಕೆ ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಮಣಿಯಬಾರದು ಎಂದರು.

ಗೋಷ್ಠಿಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಕೋಶಾಧ್ಯಕ್ಷ ಎನ್.ಶಿವಪ್ರಸಾದ್, ಮುಖಂಡ ಕೋಡಿಮೋಳೆ ರಾಜಶೇಖರ್, ತಾಲೂಕು ಅಧ್ಯಕ್ಷರಾದ ಲೋಕೇಶ್, ಅಶೋಕ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net