

ಚಾಮರಾಜನಗರ: ಆತ್ಮರಕ್ಷಣೆ ಮತ್ತು ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಲು ಕರಾಟೆ ಕಲಿಕೆ ಸಹಕಾರಿಯಾಗಿದೆ ಎಂದು ಮಾಜಿ ಶಾಸಕ ಎಸ್.ಬಾಲರಾಜು ಹೇಳಿದರು.
ನಗರದ ವಿಶ್ವ ಹಿಂದೂ ಪರಿಷತ್ ಕಾಲೇಜಿನ ಆವರಣದಲ್ಲಿ ನ್ಯಾಷಿನಲ್ ಕರಾಟೆ ಅಸೋಸಿಯೇಷನ್ ಇಂಡಿಯಾ ವತಿಯಿಂದ ಭಾನುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು. ಕರಾಟೆಯಿಂದ ಸ್ವಯಂ ರಕ್ಷಣೆಯ ಜತೆಗೆ ದೈಹಿಕ, ಮಾನಸಿಕ ಆರೋಗ್ಯ ವೃದ್ದಿಯಾಗುತ್ತದೆ. ಇಂತಹ ಕ್ರೀಡೆಯಿಂದ ಏಕಾಗ್ರತೆ ಹೆಚ್ಚುತ್ತದೆ. ಪ್ರತಿ ವಿದ್ಯಾರ್ಥಿ ಸಂಕೋಚಪಡದೆ ಕರಾಟೆಯನ್ನು ಶ್ರದ್ದೆಯಿಂದ ಕಲಿಯಬೇಕು. ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಹೆಚ್ಚು ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿರುವ ಹಿನ್ನಲೆಯಲ್ಲಿ ಹೆಣ್ಣುಮಕ್ಕಳು ಕೂಡ ರಕ್ಷಣೆ ಮಾಡಿಕೊಳ್ಳಲು ಕರಾಟೆ ಕಲಿಯಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಕರ್ನಾಟಕ ರಾಜ್ಯ ಕುಂಗ್-ಫು ಕಾರ್ಯದರ್ಶಿ ಸುದರ್ಶನ್, ಜಿಲ್ಲಾ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಮತ್ತು ವಕೀಲ ರಾಜೇಂದ್ರ, ಉಪಾಧ್ಯಕ್ಷ ಗಣೇಶ್, ಅಂತಾರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಬೆಳ್ಳಿಪದಕ ವಿಜೇತ ಎಸ್.ಯೋಗೇಶ್, ಬಾಕ್ಸಿಂಗ್ ಚಿನ್ನಪದಕ ವಿಜೇತ ಎಂ.ತೇಜಶ್ವಿನಿ, ಎನ್.ಹೃತ್ವಿಕ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಆಯೋಜಕ ಅಗರಚಂದ್ರು, ಅಂತಾರಾಷ್ಟ್ರೀಯ ಕರಾಟೆ ತೀರ್ಪುಗಾರ ಶಂಕರ್, ನಗರಸಭಾ ಮಾಜಿ ಅಧ್ಯಕ್ಷ ಸುರೇಶ್‌ನಾಯಕ, ಆಮ್‌ಆದ್ಮಿ ಪಕ್ಷದ ಕಾರ್ಯದರ್ಶಿ ಸಿದ್ದರಾಜು, ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಎಂ.ಎನ್.ರಾಜು, ಶಿವದಾಸ್, ಯರಿಯೂರು ನಾಗರಾಜು, ವಿಷ್ಣು ನಾಯಕ್ ಹಾಗೂ ಇತರರು ಹಾಜರಿದ್ದರು.