

ಚಾಮರಾಜನಗರ: ಪ್ರತಿಯೊಬ್ಬರೂ ಪತ್ರಿಕೆಯನ್ನು ಕೊಂಡು ಓದುವ ಮೂಲಕ ಪ್ರಪಂಚದ ಜ್ಞಾನ ಹೆಚ್ಚಿಸಿಕೊಳ್ಳಬಹುದು ಎಂದು ಚಾಮರಾಜನಗರ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಬಂಗಾರು ತಿಳಿಸಿದರು.
ನಗರದ ಶ್ರೀ ಭುವನೇಶ್ವರಿ ವೃತದಲ್ಲಿ ಪತ್ರಿಕಾ ದಿನಾಚರಣೆ ಅಂಗವಾಗಿ ಸೋಮವಾರ ಪತ್ರಿಕೆ ಮಾರಾಟಗಾರ ಸುರೇಶ್ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು. ಜಿಲ್ಲಾ ಕೇಂದ್ರದಲ್ಲಿ ಸುಮಾರು 40 ವರ್ಷಗಳಿಂದ ಸಹೋದರರಾದ ಮೋಹನ್, ಸುರೇಶ್ ಹಾಗೂ ರಮೇಶ್ ಪತ್ರಿಕೆ ಮಾರಾಟ ಮಾಡುವ ವೃತ್ತಿಯಲ್ಲಿ ತೊಗಿಸಿಕೊಂಡಿದ್ದಾರೆ. ಬೆಳಗಿನ ಜಾವ ಐದು ಗಂಟೆಯಿಂದ ರಾತ್ರಿ 11 ಗಂಟೆಯವರೆಗೂ ದುಡಿಯುತ್ತಾರೆ. ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಗಿದೆ ಎಂದು ತಿಳಿಸಿದರು.
ಪ್ರತಿಕೆ ಮಾರಾಟಗಾರ ಸುರೇಶ್ ಮಾತನಾಡಿ, ಇಂದಿಗೂ ಹಿರಿಯರು ಬಹಳ ಇಷ್ಟು ಪಟ್ಟು, ಉತ್ಸಾಹದಿಂದ ಪತ್ರಿಕೆಗಳನ್ನು ಓದುತ್ತಿದ್ದಾರೆ. ಅಂತವರಿಂದಲೇ ಪ್ರಸ್ತುತ ಸಂದರ್ಭದಲ್ಲಿ ಪತ್ರಿಕೆಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿದೆ ಎಂದು ಹೇಳಬಹುದು. ನಿತ್ಯವೂ ಪತ್ರಿಕೆ ಓದುವವರು ದೀರ್ಘಾಯುಷ್ಯಿಗಳಾಗಿರುತ್ತಾರೆ ಎಂದರು. ಈ ಸಂದರ್ಭದಲ್ಲಿ ಬ್ಯಾಂಕ್ ಪ್ರಕಾಶ್, ಕುಮಾರ್, ಪತ್ರಿಕಾ ಮಾರಾಟಗಾರ ರಮೇಶ, ಧನಂಜಯ, ರೇವಣ್ಣ, ಜಹೀರ್ ಅಹ್ಮದ್, ಕೆ.ಎಂ.ನಾಗರಾಜ್, ಫಲಾಮೃತ ಕೆ.ಅಜಿತ್ ಹಾಜರಿದ್ದರು.