

ಚಾಮರಾಜನಗರ : ಸುರಕ್ಷತಾ ವಿಧಾನಗಳನ್ನು ಅನುಸರಿಸಿ, ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ವಿದ್ಯುತ್ ಅವಘಡಗಳನ್ನು ತಪ್ಪಿಸಲು ಸಾಧ್ಯವಿದೆ ಎಂದು ಮೈಸೂರು ವಲಯದ ಅಪರ ಮುಖ್ಯ ವಿದ್ಯುತ್ ಪರಿವೀಕ್ಷಕ ಎಚ್.ಎಸ್.ವೆಂಕಟೇಶ್ ಹೇಳಿದರು.
ನಗರದ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಪ್ರಸರಣ ನಿಗಮ ಹಾಗೂ ವಿದ್ಯುತ್ ಪರಿವೀಕ್ಷಣಾಲಯ ವತಿಯಿಂದ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮೆಲ್ಲರ ದೈನಂದಿನ ಜೀವನವು ಸಹ ವಿದ್ಯುತ್ ಉಪಕರಣಗಳ ಬಳಕೆಯಿಂದಲೇ ಆರಂಭವಾಗಬೇಕು. ಸುನಾಮಿ, ಪ್ರವಾಹ ಹಾಗೂ ಭೂಕಂಪದಿಂದ ಸಾವಿರಾರು ಮಂದಿ ಮೃತಪಟ್ಟಿರುವ ವರದಿಗಳನ್ನು ನೋಡುತ್ತೇವೆ. ಅದೇ ಪ್ರಮಾಣದಲ್ಲಿ ವಿದ್ಯುತ್ ಅವಘಡಗಳಿಂದ ಸಾವಿಗೀಡಾಗುತ್ತಿದ್ದಾರೆ. ಅಷ್ಟೇ ಪ್ರಮಾಣದಲ್ಲಿ ಗ್ರಾಹಕರು ಮೃತಪಡುತ್ತಿದ್ದಾರೆ. ಇದಕ್ಕೆ ಕಾರಣ ವಿದ್ಯುತ್ ಬಗ್ಗೆ ನಮಗೆ ತಿಳುವಳಿಕೆ ಕೊರತೆ ಮತ್ತು ಅದು ಕಣ್ಣಿಗೆ ಕಾಣದ ಮತ್ತು ಗಮನಕ್ಕೆ ಬರುವ ಮುಂಚೆಯೇ ಆಪತ್ತು ಬರುತ್ತದೆ. ಹೀಗಾಗಿ ಈ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಚಸ್ಕಾಂ ಮೈಸೂರು ವಲಯದ ಉಪ ಮುಖ್ಯ ವಿದ್ಯುತ್ ಪರಿವೀಕ್ಷಕ ಅಲ್ತಾಪ್ ಉಸ್ದಾನ್ ಜಕಾರ್ಕಿ, ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಸಿ.ರಮೇಶ್, ಜಿಲ್ಲಾಧ್ಯಕ್ಷ ಎಂ.ಜಿ.ಸುರೇಶ್, ಮೈಸೂರು ದಕ್ಷಿಣ ವಿದ್ಯುತ್ ಪರಿವೀಕ್ಷಕಿ ವೀಣಾ, ಮೈಸೂರು ಉತ್ತರ ಪರಿವೀಕ್ಷಕಿ ನೇತ್ರಾವತಿ, ಚಾ.ನಗರ ಉಪ ವಿದ್ಯುತ್ ಪರಿವೀಕ್ಷಕಿ ಎಂ.ಅರ್ಚನಾ, ಸಹಾಯಕ ಕಾರ್ಯಪಾಲಕ ಅಭಿಯಂತರ ಸುರೇಶ್‌ಕುಮಾರ್, ದ್ರುಪದ್, ಮುದ್ದರಾಜ್, ಸ್ಥಳಿಯ ಸಂಸ್ಥೆಯ ಅಧ್ಯಕ್ಷ ಮುರಳಿಕೃಷ್ಣ ಸ್ವಾಮಿ, ಎಸ್ಸಿ/ಎಸ್ಟಿ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಪ್ರಶಾಂತ್‌ಕುಮಾರ್, ಕಿರಿಯ ಇಂಜಿನಿಯರ್ ಎಸ್.ಮಂಜುನಾಥ್, ತಾಲೂಕು ಅಧ್ಯಕ್ಷ ಗಂಗಾಧರಸ್ವಾಮಿ ಹಾಗೂ ಇತರರು ಹಾಜರಿದ್ದರು.