

ಕೊಳ್ಳೇಗಾಲ: ಪಟ್ಟಣದ ನ್ಯಾಷನಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಅಂಗವಿಕಲರು ಹಾಗೂ ಹಿರಿಯ ನಾಗರಿಕರಿಗೆ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ತಾಲೂಕು ಪಂಚಾಯಿತಿ, ನಗರಸಭೆ ಕೊಳ್ಳೇಗಾಲ, ಕೃತಕ ಅಂಗಾಂಗಳ ತಯಾರಿಕಾ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ತಾಪಂ ಇಒ ಶ್ರೀನಿವಾಸ್ ಚಾಲನೆ ನೀಡಿದರು.
ಅಂಗವಿಕಲರಿಗೆ ಅಲಿಂಮ್ಕೊ ಸಂಸ್ಥೆ ವತಿಯಿಂದ ಕೃತಕ ಅಂಗಾಂಗಳನ್ನು ವಿತರಣೆ ಮಾಡುವ ಸಲುವಾಗಿ ತಪಾಸಣೆ ಕಾರ್ಯಕ್ರಮ ನಡೆಸಲಾಗಿದೆ. ನಗರಸಭೆ ವ್ಯಾಪ್ತಿ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದಲ್ಲಿರುವ ಅಂಗವಿಕಲರು ತಪಾಸಣೆಗೊಳಪಟ್ಟಿದ್ದಾರೆ. ಈ ವೇಳೆ ಅಲಿಂಮ್ಕೊ ಸಂಸ್ಥೆ ಅಗತ್ಯವಿರುವವರಿಗೆ ಸಲಕರಣೆಗಳ ಪಟ್ಟಿ ಮಾಡಿಕೊಂಡಿದೆ ಎಂದು ಮಾಹಿತಿ ನೀಡಿದರು.
ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಅಂಗವಿಕಲರಿಗೆ ಕಾರ್ಯಕ್ರಮಕ್ಕೆ ಆಗಮಿಸಲು ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಧ್ಯಾಹ್ನದ ಉಪಾಹಾರ ವ್ಯವಸ್ಥೆ ಕಲ್ಪಿಸಲಾಗಿತ್ತು. ನಗರಸಭೆ ಪೌರಾಯುಕ್ತ ಎ.ರಮೇಶ್, ತಾಲೂಕು ಆರೋಗ್ಯ ಅಧಿಕಾರಿ ಗೋಪಾಲ್, ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ಸಕಲೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಮತ್ತಿತರಿದ್ದರು.