ಸೇವೆಯಿಂದ ವಾಟರ್‌ಮನ್ ವಜಾಗೊಳಿಸಿ

Published on

ಚಾಮರಾಜನಗರ : ನಿರಂತರಜ್ಯೋತಿ ವಿದ್ಯುತ್ ಸಂಪರ್ಕವನ್ನು ಖಾಸಗಿಯವರಿಗೆ ಮಾರಾಟ ಮಾಡಿದ್ದಕ್ಕೆ ಅಮಾನತುಗೊಂಡು ಇದೀಗ ಮತ್ತೆ ಕೆಲಸಕ್ಕೆ ಹಾಜರಾಗಿರುವ ಗ್ರಾಮ ಪಂಚಾಯಿತಿ ವಾಟರ್‌ಮನ್ ಮಹದೇವಯ್ಯ ಅವರನ್ನು ವಜಾಗೊಳಿಸಬೇಕು ಎಂದು ಬಿಸಲವಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಪದ್ಮರಾಜು ಒತ್ತಾಯಿಸಿದರು.

ತಾಲೂಕಿನ ಬಿಸಲವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಟರ್‌ಮನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹದೇವಯ್ಯ ಎಂಬಾತ, ಖಾಸಗಿ ವ್ಯಕ್ತಿಯ ಪಂಪ್‌ಸೆಟ್‌ಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿ 3 ತಿಂಗಳು ಅಮಾನತುಗೊಂಡಿದ್ದನು. ಈ ವೇಳೆ ತಾತ್ಕಾಲಿಕವಾಗಿ ಗ್ರಾಮದ ಮಂಜುನಾಥ್ ಅವರನ್ನು ನೇಮಕ ಮಾಡಲಾಗಿತ್ತು. ಆದರೆ ಮಹದೇವಯ್ಯ ಅವರನ್ನು ಮತ್ತೆ ನೇಮಕ ಮಾಡಿಕೊಳ್ಳಲಾಗಿದ್ದು, ಅವರನ್ನು ವಜಾಗೊಳಿಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಹಿಂದಿನ ವಾಟರ್‌ಮನ್ ಮಹದೇವಯ್ಯ ಎಸಗಿದ್ದ ಅಕ್ರಮದಿಂದ ಗ್ರಾಮ ಪಂಚಾಯಿತಿಗೆ 7 ಲಕ್ಷ ರೂ. ವಿದ್ಯುತ್ ಬಿಲ್ ಬಂದಿತ್ತು. ಈ ನಿಟ್ಟಿನಲ್ಲಿ ಮಹದೇವಯ್ಯ ಅವರನ್ನು ಕೆಲಸದಿಂದ ವಜಾಗೊಳಿಸಿ ಮಂಜುನಾಥ್ ಅವರನ್ನು ಕೆಲಸದಲ್ಲಿ ಮುಂದುವರಿಸಬೇಕು ಎಂದು ಮನವಿ ಮಾಡಿದರು. ಗ್ರಾಮಸ್ಥರಾದ ಮಹದೇವು, ಚೆನ್ನಂಜಯ್ಯ, ಸಿದ್ದರಾಜು, ಮಹದೇವಸ್ವಾಮಿ, ಮಂಜುನಾಥ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net